ಭದ್ರಾ ಡ್ಯಾಂ ಬಳಿ ಗಾರ್ಡನ್ ನಿರ್ಮಿಸಲು ಚಿಂತನೆ: ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ

Update: 2019-09-06 18:23 GMT

ಚಿಕ್ಕಮಗಳೂರು. ಸೆ.6: ಭದ್ರಾ ಡ್ಯಾಂ ಸುತ್ತಮುತ್ತ ಪ್ರವಾಸೋದ್ಯಮಕ್ಕೆ ಉತ್ತಮ ವಾತಾವರಣವಿದ್ದು, ಇದನ್ನು ಅಭಿವೃದ್ಧಿಪಡಿಸಿಕೊಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದ್ದಾರೆ.

ತರೀಕೆರೆ ತಾಲೂಕು ಲಕ್ಕವಳ್ಳಿ ಭದ್ರಾ ಡ್ಯಾಂ ಭರ್ತಿಯಾದ್ದರಿಂದ ಇಂದು ಬಾಗಿನ ಮತ್ತು ಗಂಗಾಪೂಜೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭದ್ರಾ ಡ್ಯಾಂ ಭರ್ತಿಯಾಗಿದ್ದರಿಂದ ಪ್ರತಿನಿತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತಿದ್ದು ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳವಾಗಿರುವುದರಿಂದ ಸಚಿವರು, ಸಂಸದರ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ಸಂಸದೆ ಶೋಭ ಕರಂದ್ಲಾಜೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಅಗತ್ಯವಿದೆ. ಪ್ರತಿ ಹನಿ ನೀರು ಅಮೂಲ್ಯ. ಭೂಮಿ, ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳು ಕಠಿಣವಾಗದ ಪರಿಸ್ಥಿತಿ ಎದುರಾಗಲಿದ್ದು, ಈಗಿನಿಂದಲೇ ನಾವು ಎಚ್ಚರ ವಹಿಸುವುದು ಬಹಳ ಅಗತ್ಯ ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲಾ ಡ್ಯಾಂಗಳು ಭರ್ತಿಯಾಗಿದ್ದು, ಅತಿವೃಷ್ಠಿ ಸಂದರ್ಭದಲ್ಲಿ ಆದ ಮಳೆಯ ನೀರನ್ನು ಎಲ್ಲಾ ಕೆರೆಗಳಿಗೆ ತುಂಬಿಸುವ ಯೋಜನೆಗಳಿಗೆ ಇದುವರೆಗೂ ಯಾರೂ ಗಮನ ಹರಿಸಿಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚು ಮಳೆ ಬಂದಂತಹ ಸಂದರ್ಭದಲ್ಲಿ ಮಳೆ ನೀರು ಆಯಾ ಭಾಗದ ಕೆರೆಗಳಿಗೆ ಸಂಗ್ರಹವಾಗುವಂತೆ ಯೋಜನೆ ರೂಪಿಸಲು ತಜ್ಞರ ಸಮಿತಿ ರಚಿಸಲಾಗಿದೆ ಎಂದ ಸಂಸದರು, ಈ ಬಗ್ಗೆ ಪ್ರಧಾನ ಮಂತ್ರಿಗಳು ತುಂಬಾ ಉತ್ಸುಕರಾಗಿದ್ದಾರೆ. ದೇಶದಲ್ಲಿ ನದಿಗಳ ಜೋಡಣೆ ಯೋಜನೆ ತ್ವರಿತವಾಗಿ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು. ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಠಿಯಿಂದ ಬಹಳಷ್ಟು ತೊಂದರೆಯಾಗಿದ್ದು, ಪರಿಸರ ಅಸಮತೋಲನದಿಂದ ಈ ರೀತಿಯ ವೈಪರಿತ್ಯಗಳು ಪರಿಸರದ ಮೇಲೆ ಆಗುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕ ಅಭಿವೃದ್ದಿಯನ್ನು ಮಾಡಬೇಕಗಿದೆ ಎಂದು ಹೇಳಿದರು.

ತರೀಕೆರೆ ಶಾಸಕ ಡಿ.ಎಸ್ ಸುರೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಬರಗಾಲವಿತ್ತು. ಕಳೆದ ಬಾರಿಯಿಂದ ಉತ್ತಮ ಮಳೆಯಾಗಿ ಎರಡನೇ ಬಾರಿಗೆ ಭದ್ರಾ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಪ್ರತೀ ವರ್ಷ ನಡೆಯುವಂತಾಗಲಿ ಎಂದ ಅವರು, ಭದ್ರಾ ತುಂಬಿ ಹರಿಯುತ್ತಿರುವುದು ಈ ಭಾಗದ ರೈತರಿಗೆ ಅನುಕೂಲವಾಗಿದೆ. ತರೀಕೆರೆ, ಕಡೂರು ತಾಲೂಕು 900 ಕೋಟಿ ರೂ. ಗಳ ವೆಚ್ಚದಲ್ಲಿ ಎಂಬತ್ತು ಕೆರೆಗಳಿಗೆ ಭದ್ರಾ ಡ್ಯಾಂನಿಂದ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಭದ್ರಾ ಡ್ಯಾಂ ನೀರು ತರೀಕೆರೆ ತಾಲೂಕಿಗೆ ಹೆಚ್ಚು ಉಪಯೋಗವಾಗುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಮುಂದಿನ ದಿನಗಳಲ್ಲಿ ಭದ್ರಾ ಡ್ಯಾಂ ನೀರು ತರೀಕೆರೆಗೆ ಹೆಚ್ಚು ಉಪಯೋಗವಾಗುವ ಯೋಜನೆಯನ್ನು ರೂಪಿಸಲಾಗುವುದು. ಭದ್ರಾ ಡ್ಯಾಂ ಅನ್ನು ಕೆ.ಆರ್.ಎಸ್ ಬೃಂದಾವನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಜಿಲ್ಲೆಯ ಸಚಿವರು, ಈ ಭಾಗದ ಜನಪ್ರತಿನಿಧಿಗಳೊಂದಿಗೆ ಸೇರಿ ಅಭಿವೃದ್ಧಿಪಡಿಸಲು ಹಾಗೂ ಡ್ಯಾಂ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಶ್ರೀ ಮಾಲತೇಶ್, ತಾಲೂಕು ಪಂಚಾಯತ್ ಅಧ್ಯಕ್ಷೆ ಪದ್ಮಾವತಿ ಸಂಜೀವ ಕುಮಾರ್ ಮಾತನಾಡಿದರು.

ಇದಕ್ಕೂ ಮುನ್ನ ಸಂಸದರು, ಶಾಸಕರು ಸೇರಿದಂತೆ ರಂಗೇನಹಳ್ಳಿ ಹಾಗೂ ಲಕ್ಕವಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಆರ್ ಆನಂದಪ್ಪ, ಉಪವಿಭಾಗಾಧಿಕಾರಿ ರೂಪ, ತಹಶೀಲ್ದಾರ್ ಧರ್ಮೋಜಿ ರಾವ್, ಮುಖಂಡ ಶಂಭೈನೂರು ಆನಂದಪ್ಪ ಹಾಗೂ ತರೀಕೆರೆ ತಾಲೂಕು ವಿವಿಧ ಜನಪ್ರತಿನಿಧಿಗಳು, ನೀರು ಬಳಕೆದಾರರು, ರೈತರ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News