ಡಿಕೆಶಿ ತನಿಖೆ ಯಾಕೆ ಬೇಡ?

Update: 2019-09-07 06:11 GMT

ಒಂದೆಡೆ ತಮಿಳುನಾಡು, ಕಾಂಗ್ರೆಸ್‌ನ ಹಿರಿಯ ನಾಯಕ ಚಿದಂಬರಂ ಬಂಧನದ ಕಾರಣಕ್ಕೆ ಸುದ್ದಿಯಾಗುತ್ತಿದ್ದರೆ, ಇತ್ತ ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಬಂಧನಕ್ಕಾಗಿ ದೇಶದಲ್ಲಿ ಸುದ್ದಿಯಾಗುತ್ತಿದೆ. ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯವು ಮಂಗಳವಾರ ತಡರಾತ್ರಿ ಬಂಧಿಸಿತು. ಚಿದಂಬರಂ ಮತ್ತು ಡಿಕೆಶಿ ಅವರ ಬಂಧನ ‘ರಾಜಕೀಯ ಸೇಡಿನ ಕ್ರಮ’ ಎಂದು ಕಾಂಗ್ರೆಸ್ ಹೇಳಿಕೊಂಡಿದೆ ಮಾತ್ರವಲ್ಲ, ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಉಭಯ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. ಕೇಂದ್ರ ಸರಕಾರ ವಿವಿಧ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕಾಗಿ ಬಳಸುತ್ತಿರುವುದು ಗುಟ್ಟಿನ ವಿಷಯವೇನೂ ಅಲ್ಲ. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವ ಗುಜರಾತ್ ಬಿಜೆಪಿಯ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ಮುಖ್ಯ ಪಾತ್ರವಿತ್ತು. ಕೇಂದ್ರದ ಬಿಜೆಪಿ ನಾಯಕರಿಗೆ ಆ ಪ್ರಯತ್ನದಲ್ಲಿ ತೀವ್ರ ಮುಜುಗರವುಂಟಾಗಿತ್ತು. ಅದಾಗಲೇ, ಡಿಕೆಶಿ ಕೇಂದ್ರದ ಕೆಂಗಣ್ಣಿಗೆ ಬಿದ್ದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಾಗ, ಬಿಜೆಪಿ ಸರಕಾರ ರಚಿಸದಂತೆ ತಡೆಯುವಲ್ಲೂ ಡಿಕೆಶಿ ಪಾತ್ರ ಬಹುದೊಡ್ಡದಿತ್ತು. ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಮಾರಾಟವಾಗದಂತೆ ಜೋಪಾನ ಮಾಡಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗುವಂತೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್‌ನಲ್ಲೂ ತನ್ನ ಪ್ರಭಾವವನ್ನು ಡಿಕೆಶಿ ಎತ್ತರಿಸಿಕೊಂಡಿದ್ದರು. ಕಾಂಗ್ರೆಸ್‌ಗೆ ಡಿಕೆಶಿ ಅನಿವಾರ್ಯ ಎನ್ನುವಂತಹ ಸನ್ನಿವೇಶವನ್ನು ಅವರು ಪಕ್ಷದೊಳಗೆ ಈಗಾಗಲೇ ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಮೈತ್ರಿ ಸರಕಾರ ಪತನವಾಗುತ್ತಿರುವ ಹೊತ್ತಿನಲ್ಲಿ ಕೊನೆಯ ಕ್ಷಣದವರೆಗೂ ಸರಕಾರವನ್ನು ಉಳಿಸಲು ಅವರು ಹೆಣಗಾಡಿದ್ದರು. ಡಿಕೆಶಿಯ ಹಣ ಮತ್ತು ಜನಬಲ ಬಿಜೆಪಿಗೆ ರಾಜ್ಯದಲ್ಲಿ ರಾಜಕೀಯವಾಗಿ ಮುಂದುವರಿಯಲು ಬಹುದೊಡ್ಡ ತಡೆಯಾಗಿದೆ. ಡಿಕೆಶಿಗೆ ಮೂಗುದಾರ ತೊಡಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಸಹಜವಾಗಿಯೇ ಬಲಹೀನವಾಗುತ್ತದೆ ಎಂದು ಕೇಂದ್ರದ ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ. ಡಿಕೆಶಿ ದೌರ್ಬಲ್ಯ ಎಲ್ಲಿದೆ ಎನ್ನುವುದನ್ನು ಗುರುತಿಸಿ, ಕೇಂದ್ರ ಇದೀಗ ಗುರಿಯಿಟ್ಟು ಹೊಡೆದಿದೆ.

ಇದೊಂದು ‘ರಾಜಕೀಯ ಸೇಡಿನ ಕ್ರಮ’ವೇ ಆಗಿರಬಹುದು. ಆದರೆ ಆ ಕಾರಣಕ್ಕಾಗಿ ನಾವು ಡಿಕೆಶಿ ಅಥವಾ ಚಿದಂಬರಂ ಅವರನ್ನು ಅಮಾಯಕರು ಎಂದು ಕರೆಯುವಂತಿಲ್ಲ. ಚಿದಂಬರಂ ಅತ್ಯುತ್ತಮ ರಾಜಕೀಯ ಮುತ್ಸದ್ದಿ, ಆರ್ಥಿಕ ವಿಷಯಗಳ ಕುರಿತಂತೆ ಅಪಾರ ಅನುಭವವುಳ್ಳ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಚಿದಂಬರಂ ಕುಟುಂಬ ಶೇಖರಿಸಿಟ್ಟಿರುವ ಭಾರೀ ಸಂಪತ್ತು ತನಿಖೆಗೆ ಒಳಪಡುವುದಕ್ಕೆ ಎಲ್ಲ ಅರ್ಹತೆಯನ್ನು ಹೊಂದಿದೆ ಎನ್ನುವುದನ್ನು ನಾವು ಮರೆಯಬಾರದು. ಇತ್ತ, ತನ್ನ ಹಣಬಲದ ಮೂಲಕವೇ ರಾಜಕೀಯವಾಗಿ ಬೆಳೆದು ನಿಂತಿರುವ ಡಿಕೆಶಿಯವರೂ ತನಿಖೆಗೆ ಅರ್ಹರೇ ಆಗಿದ್ದಾರೆ. ಅತಿ ವೇಗದಲ್ಲಿ ಹೆಚ್ಚಿರುವ ಅವರ ಹಣದ ಮೂಲವನ್ನು ಪ್ರಶ್ನಿಸುವ ಅಧಿಕಾರ ಈ ದೇಶದ ಪ್ರತಿ ಪ್ರಜೆಗೂ ಇದೆ. ಅವರು ಸಂಪೂರ್ಣ ಅಮಾಯಕರು ಎಂದು ಬಹಿರಂಗವಾಗಿ ಎದೆತಟ್ಟಿ ಹೇಳುವ ಧೈರ್ಯ ಕಾಂಗ್ರೆಸ್‌ನೊಳಗಿರುವ ಇತರ ನಾಯಕರಿಗಾದರೂ ಇದೆಯೇ? ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಾಗ, ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನವನ್ನು ನಿರಾಕರಿಸಿದ್ದು, ಅವರ ಮೇಲಿರುವ ಕಳಂಕ ಆರೋಪಗಳ ಕಾರಣಕ್ಕಾಗಿ ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಬಳಿಕ ತನ್ನ ಹಣ, ಜಾತಿ, ಜನ ಬಲದ ಮೂಲಕ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡರು. ನಿಜ, ಕೇವಲ ಕಾಂಗ್ರೆಸ್‌ನೊಳಗಷ್ಟೇ ಭ್ರಷ್ಟಾಚಾರಿಗಳಿರುವುದೇ? ಬಿಜೆಪಿಯೊಳಗೆ ಭ್ರಷ್ಟರು ಇಲ್ಲವೇ? ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕರು ಕೇಳಬಹುದು. ಆದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವ್ವದಲ್ಲಿದ್ದಿದ್ದರೆ ಇದೇ ತನಿಖಾ ಸಂಸ್ಥೆಗಳು ಚಿದಂಬರಂ ಅಥವಾ ಡಿಕೆಶಿಯಂತಹ ನಾಯಕರನ್ನು ಮುಟ್ಟುವುದಕ್ಕೆ ಸಾಧ್ಯವಿತ್ತೇ? ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ತನಿಖೆ, ಬಂಧನಗಳಿಗೆ ‘ರಾಜಕೀಯ ಕಾರಣಗಳು’ ಇದ್ದರೂ, ಈ ನಾಯಕರ ಮೇಲಿರುವ ಆರೋಪಗಳು ಸಂಪೂರ್ಣ ನಿರಾಕರಿಸುವಂತಹದಲ್ಲ ಎನ್ನುವುದೂ ಅಷ್ಟೇ ಮುಖ್ಯವಾಗಿದೆ. ಯಾವ ಕಾರಣಗಳಿಂದಾದರೂ ಸರಿ, ಭ್ರಷ್ಟ ರಾಜಕಾರಣಿಗಳು ತನಿಖಾ ಸಂಸ್ಥೆಗಳಿಂದ ಕೊನೆಗೂ ಪ್ರಶ್ನೆಗೊಳಗಾಗುತ್ತಿದ್ದಾರೆ. ಬಿಜೆಪಿಯೊಳಗಿರುವ ಭ್ರಷ್ಟರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ನಮ್ಮನ್ನು ನಾವೇ ಸದ್ಯಕ್ಕೆ ಸಮಾಧಾನಿಸಿಕೊಂಡು ತನಿಖೆ, ವಿಚಾರಣೆಗೆ ಅವಕಾಶ ನೀಡಬೇಕಾಗಿದೆ.

ಈ ತನಿಖೆ, ಬಂಧನ ಎಲ್ಲಿಯವರೆಗೆ ಮುಂದುವರಿಯಬಹುದು ಎನ್ನುವುದನ್ನು ಹೇಳುವಂತಿಲ್ಲ. ಇಬ್ಬರೂ ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಹಣವಂತರಾಗಿರುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರಿದ್ದಾರೆ. ಇದೇ ಸಂದರ್ಭದಲ್ಲಿ ಉಭಯ ನಾಯಕರು ಕೇವಲ ರಾಜಕೀಯ ಬಲಿಪಶುಗಳೇ ಆಗಿದ್ದರೆ, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕವೇ ಅವರು ತಮ್ಮ ಅಮಾಯಕತೆಯನ್ನು ಸಾಬೀತು ಪಡಿಸಿಕೊಳ್ಳಬೇಕಾಗಿದೆ. ಈ ದೇಶದಲ್ಲಿ ರಾಜಕೀಯ ಕಾರಣಗಳಿಗಾಗಿ ಯಾವುದೇ ರಾಜಕೀಯ ಅಥವಾ ಹಣದ ಹಿನ್ನೆಲೆಯಿಲ್ಲದ ನೂರಾರು ಅಮಾಯಕರು ಜೈಲುಪಾಲಾದ ಉದಾಹರಣೆಗಳಿವೆ. ಮಾಡದ ತಪ್ಪಿಗಾಗಿ ಭಯೋತ್ಪಾದಕರ ಹಣೆಪಟ್ಟಿ ಹೊತ್ತು ಹತ್ತು ವರ್ಷಗಳಿಗೂ ಅಧಿಕ ಕಾಲ ಜೈಲಿನಲ್ಲೇ ಬದುಕನ್ನು ಕಳೆದು ಬಳಿಕ ನಿರಪರಾಧಿಗಳಾಗಿ ಹೊರಬಂದವರಿದ್ದಾರೆ. ಇನ್ನೂ ಜೈಲಿನಲ್ಲೇ ಕೊಳೆಯುತ್ತಿರುವವರ ಸಂಖ್ಯೆಯೂ ಸಣ್ಣದೇನಲ್ಲ. ನಾವಿಂದು ಇಂತಹ ಅಮಾಯಕರ ಪರವಾಗಿ ಮಾತನಾಡಬೇಕಾಗಿದೆ. ದುರದೃಷ್ಟವಶಾತ್ ಇಂತಹ ಅಮಾಯಕರ ಪರವಾಗಿ ಸಮಾಜ ಮೌನವಾಗಿದೆ. ರಾಜಕೀಯ ನಾಯಕರ ವಿರುದ್ಧ ಸಣ್ಣ ತನಿಖೆ ನಡೆದರೂ ಬೀದಿ ರಂಪವಾಗುತ್ತದೆ. ಡಿಕೆಶಿ ಬಂಧನವಾದ ಬೆನ್ನಿಗೇ ರಾಜ್ಯದಲ್ಲಿ ಬಂದ್‌ಗಳು ನಡೆದವು. ಪ್ರತಿಭಟನಾಕಾರರಿಂದ ಸಾರ್ವಜನಿಕ ಸೊತ್ತುಗಳಿಗೆ ಹಾನಿಯಾದವು. ಡಿಕೆಶಿ ಅವರ ತನಿಖೆ,ಬಂಧನವನ್ನು ವಿರೋಧಿಸುವ ಕ್ರಮ ಇದು ಖಂಡಿತವಾಗಿಯೂ ಅಲ್ಲ. ಈ ಮೂಲಕ ತನಿಖೆ, ವಿಚಾರಣೆಯನ್ನು ತಡೆಯಲು ಪರೋಕ್ಷ ಒತ್ತಡ ಹೇರಿದಂತಾಗುತ್ತದೆ. ನಿಷ್ಪಕ್ಷಪಾತವಾದ ತನಿಖೆ, ವಿಚಾರಣೆ ನಡೆಯಲು ಅವಕಾಶ ನೀಡಿ ಡಿಕೆಶಿ ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸಲು ಅವಕಾಶ ಮಾಡಿಕೊಡುವುದು ಸ್ವತಃ ಡಿಕೆಶಿ ರಾಜಕೀಯ ಭವಿಷ್ಯಕ್ಕೂ ಅತ್ಯಗತ್ಯವಾಗಿದೆ. ತನಿಖೆ, ವಿಚಾರಣೆಗೆ ತಡೆಯೊಡ್ಡಲು ಯತ್ನ ನಡೆದಷ್ಟೂ, ಡಿಕೆಶಿಯ ವಿಶ್ವಾಸಾರ್ಹತೆ ನಷ್ಟವಾಗುತ್ತ ಹೋಗುತ್ತದೆ ಎನ್ನುವ ಎಚ್ಚರಿಕೆ ಅವರ ಅಭಿಮಾನಿಗಳಿಗೂ ಇರಬೇಕು. ಚಿದಂಬರಂ ಮತ್ತು ಡಿಕೆಶಿ ಇಬ್ಬರೂ ತಮ್ಮ ನಿರಪರಾಧಿತ್ವವನ್ನುನ್ಯಾಯಾಲಯದಲ್ಲಿ ಸಾಬೀತು ಪಡಿಸಿ ಮತ್ತಷ್ಟು ಉಜ್ವಲ ವ್ಯಕ್ತಿತ್ವದೊಂದಿಗೆ ಹೊರಬರುತ್ತಾರೆ ಎಂಬ ಭರವಸೆಯೊಂದಿಗೆ ತನಿಖೆ ಮುಂದುವರಿಯಲು ಜನರು ಅವಕಾಶ ಮಾಡಿಕೊಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News