ಕಾಂಗ್ರೆಸ್-ಜೆಡಿಎಸ್ ಶಾಸಕರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಸಚಿವ ಕೆ.ಎಸ್.ಈಶ್ವರಪ್ಪ

Update: 2019-09-08 12:59 GMT

ಬೆಳಗಾವಿ, ಸೆ. 8: ಕಾಂಗ್ರೆಸ್-ಜೆಡಿಎಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದೆ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿಯಿಂದ ಯಾವುದೇ ಆಪರೇಷನ್ ಕಮಲ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನಡೆಸುತ್ತಿದ್ದವರ ನಡವಳಿಕೆಯಿಂದ ಬೇಸತ್ತು ಕೆಲವು ಶಾಸಕರು ರಾಜೀನಾಮೆ ನೀಡಿದರು. ಆದುದರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದ್ದು ಎಂದರು.

ಇನ್ನೂ 10ರಿಂದ 15 ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಮ್ಮ ಸಂಪರ್ಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ್ಯಾರು ಇಲ್ಲ, ಅನರ್ಹ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು.

ರಾಜಕಾರಣ ಸಲ್ಲ: ಚಿಕ್ಕೋಡಿ ತಾಲೂಕಿನಲ್ಲಿ ನೆರೆ ಸಂತ್ರಸ್ತರು ಪರಿಹಾರದ ವಿಚಾರದಲ್ಲಿ ಜನರು ಪ್ರಶ್ನಿಸಿದರು. ಆದರೆ, ‘10 ಸಾವಿರ ರೂ.ಕೊಟ್ಟಿದ್ದೇ ಹೆಚ್ಚಾಯಿತು’ ಎಂದು ನಾನು ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ವಿನಾಕಾರಣ ರಾಜಕಾರಣ ಮಾಡಿದ್ದಾರೆ ಎಂದು ಈಶ್ವರಪ್ಪ ದೂರಿದರು.

ಬಿಜೆಪಿಯಲ್ಲಿ ಜಾತಿ ರಾಜಕಾರಣ ಇಲ್ಲ. ಪ್ರಧಾನಿ ಮೋದಿ ಅವರದು ಯಾವ ಜಾತಿ ಎಂದು ತಿಳಿಯಲು ಬಹಳಷ್ಟು ದಿನಗಳೇ ಬೇಕಾಯಿತು. ಪಕ್ಷದ ವರಿಷ್ಠರು ಮಾಡುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಿದ್ದೇವೆ ಎಂದು ಈಶ್ವರಪ್ಪ, ಕುರುಬ ಸಮುದಾಯಕ್ಕೆ ಡಿಸಿಎಂ ಹುದ್ದೆ ತಪ್ಪಿದ್ದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News