'ತಾಂಡಾಗಳಲ್ಲಿ ಸಂಚಾರಿ ಮದ್ಯ ಮಾರಾಟ' ಹೇಳಿಕೆ: ಕ್ಷಮೆ ಕೋರಿದ ಸಚಿವ ಎಚ್.ನಾಗೇಶ್
ಬೆಂಗಳೂರು, ಸೆ.8: ಮನೆ ಬಾಗಿಲಿಗೆ ಮದ್ಯ ಮಾರಾಟ ವಿವಾದದ ಸ್ವರೂಪ ಪಡೆದ ಕಾರಣದಿಂದ, ದಿಢೀರ್ ನಿರ್ಧಾರದಿಂದ ಹಿಂದೆ ಸರಿದಿದ್ದ ಅಬಕಾರಿ ಸಚಿವ ಎಚ್.ನಾಗೇಶ್, ಲಂಬಾಣಿ ತಾಂಡಾಗಳಲ್ಲಿ ಸಂಚಾರಿ ಮದ್ಯ ಮಾರಾಟ ಮಾಡುವ ಹೇಳಿಕೆಗೂ ಕ್ಷಮೆ ಕೋರಿ ಲಂಬಾಣಿ ಸಮುದಾಯದ ಮುಖಂಡರಿಗೆ ಪತ್ರ ಬರೆದಿದ್ದಾರೆ.
ತಾಂಡಗಳ ಮನೆ ಮನೆಗೆ ಸಂಚಾರಿ ವಾಹನದ ಮೂಲಕ ಮಧ್ಯ ಮಾರಾಟ ಮಾಡಲು ಚಿಂತನೆ ಇದೆ ಎಂಬ ಹೇಳಿಕೆ ವಾಪಸ್ಸು ಪಡೆದಿದ್ದೇನೆ. ಇಂತಹ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಈ ಬಗ್ಗೆ ಲಂಬಾಣಿ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಎಚ್.ನಾಗೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಂಬಾಣಿ ಸಮುದಾಯದ ಮುಖಂಡ ಅನಂತ್ ನಾಯ್ಕ, ತಾಂಡದಲ್ಲಿರುವ ಜನಾಂಗದವರು ಮದ್ಯ ಕುಡಿಯುತ್ತಾರೆ ಎಂದು ಬಿಂಬಿಸುವ ಸಚಿವರ ಹೇಳಿಕೆ ಖಂಡನೀಯವಾಗಿದ್ದು, ಈ ಸಂಬಂಧ ಕ್ಷಮೆ ಕೋರುವಂತೆ ಒತ್ತಾಯ ಮಾಡಲಾಗಿತ್ತು ಎಂದರು.
ತಾಂಡಗಳಿಗೆ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆಗಳ ಅಗತ್ಯ ಇದೆ.ಆದರೆ, ಯಾವುದೇ ಕಾರಣಕ್ಕೂ ಮದ್ಯ ಮಾರಾಟ ಮಳಿಗೆ ತೆರಯಬಾರದು.ಜೊತೆಗೆ, ಸಮುದಾಯದ ನಿಗಮಗಳಿಗೆ ಅಗತ್ಯ ನೆರವು ನೀಡಿ, ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.