ಕಲಬುರಗಿಯಲ್ಲಿ ಸೆ.17 ರಂದು ಕೆಎಟಿ ಪೀಠ ಉದ್ಘಾಟನೆ ?

Update: 2019-09-08 14:28 GMT

ಕಲಬುರಗಿ, ಸೆ.8: ಕಲಬುರಗಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಪೀಠ(ಕೆಎಟಿ) ಸ್ಥಾಪನೆಗೆ ಸರಕಾರ ಮುಂದಾಗಿದ್ದು, ಸೆ.17ರಂದು ಮಧ್ಯಾಹ್ನ 1ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೀಠದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಈ ಭಾಗದ ಜನರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಫಲ ದೊರೆತಂತಾಗಲಿದೆ. 

ಕಲಬುರಗಿಯಲ್ಲಿ ಕೆಎಟಿ ಪೀಠ ಸ್ಥಾಪನೆಯಿಂದ ಹೈ-ಕ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರು ವರ್ಗಾವಣೆ, ಭಡ್ತಿ ಮುಂತಾದ ಕಾನೂನಾತ್ಮಕ ಪ್ರಕರಣಗಳಿಗೆ ಬೆಂಗಳೂರಿಗೆ ಅಲೆದಾಡುವುದು ತಪ್ಪಿದಂತಾಗಲಿದೆ. ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಕೆಎಟಿ ಪೀಠ ಸ್ಥಾಪನೆಗೆ ಆಗ್ರಹಿಸಿ ನ್ಯಾಯಾವಾದಿಗಳು ಕಲಬುರಗಿ ಬಂದ್ ಮತ್ತು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಹೋರಾಟ ನಡೆಸಿದ್ದರು. ಇದಕ್ಕೆ ಮಣಿದ ಸಿದ್ದರಾಮಯ್ಯ ಸರಕಾರ ಕಲಬುರಗಿ ಮತ್ತು ಧಾರವಾಡದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ಕಲಬುರಗಿಯಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಸ್ಥಳ ಸಿಗದೇ ಇರುವುದರಿಂದ ಪೀಠ ಸ್ಥಾಪನೆ ನೆನೆಗುದಿಗೆ ಬಿದ್ದಿತ್ತು. ಈ ಮೊದಲು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಸ್ಥಳ ನೀಡುವಂತೆ ಕೋರಲಾಗಿತ್ತು. ಆದರೆ, ಹೈಕೋರ್ಟ್ ಪೀಠದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಜಾಗ ನೀಡದೇ ಇರುವುದರಿಂದ ಪೀಠ ಸ್ಥಾಪನೆ ಕನಸಾಗಿಯೇ ಉಳಿದಿತ್ತು.

ಇದೀಗ ಬಿಎಸ್‌ವೈ ನೇತೃತ್ವದ ಸರಕಾರ ಕಲಬುರಗಿಯಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಮುಂದಾಗಿದ್ದು, ಎಲ್ಲವು ಅಂದುಕೊಂಡಂತೆ ಸುಸೂತ್ತವಾಗಿ ನಡೆದರೆ ಸೆ.17ರ ಹೈ-ಕ ವಿಮೋಚನಾ ದಿನದಂದೇ ಕೆಎಟಿ ಪೀಠದ ಉದ್ಘಾಟನೆ ನಡೆಯಲಿದೆ. ಪೀಠ ಸ್ಥಾಪನೆಯಿಂದಾಗಿ ಈ ಭಾಗದ ಜನರ ಅದರಲ್ಲೂ ವಿಶೇಷವಾಗಿ ಸರಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದಂತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News