ತೃಪ್ತಿ ಎಂಬ ಪದ ಕಾಣದಾಗಿದೆ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2019-09-08 17:42 GMT

ಬೆಂಗಳೂರು, ಸೆ.8: ಇಂದಿನ ದಿನಮಾನಗಳಲ್ಲಿ ತೃಪ್ತಿ ಎಂಬ ಪದ ಕಾಣದಾಗಿದ್ದು, ಎಷ್ಟೇ ಸಂಪತ್ತು ಸಂಪಾದಿಸಿದರು, ಇನ್ನಷ್ಟು ಬೇಕು ಎಂಬ ಭಾವನೆ ಹೆಚ್ಚುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

ರವಿವಾರ ನಗರದ ಪುರಭವನದಲ್ಲಿ ಬೆಂಗಳೂರು ಮಹಾ ಸಾರಿಗೆ ಸಂಸ್ಥೆ ನೌಕರರ ಬಳಕೆದಾರರ ಸಹಕಾರ ಸಂಘ ಏರ್ಪಡಿಸಿದ್ದ, ಸಂಘದ 55ನೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ ಈ ಸಂಪತ್ತು ತೃಪ್ತಿ ತಂದಿದೆ ಎಂಬ ಭಾವನೆ ಯಾರಲ್ಲೂ ಕಾಣಲು ಅಸಾಧ್ಯ. ಇದರಿಂದ ಸಮಾಜದಲ್ಲಿ ಭ್ರಷ್ಟಾಚಾರ, ದರೋಡೆ, ಅವ್ಯವಹಾರಗಳು ನಡೆಯಲು ಪೂರಕವಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಸಮಾಜದ ಬದಲಾವಣೆಗೆ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಸಂಪತ್ತು ಹೆಚ್ಚಿದಷ್ಟು ದುರಾಸೆ ಹೆಮ್ಮರವಾಗಿ ಬೆಳೆಯುತ್ತಲೇ ಹೋಗುತ್ತದೆ. ಇದರಿಂದ ಸುಸ್ಥಿತ ಸಮಾಜ ನಿರ್ಮಾಣ ಮಾಡಲು ಅಸಾಧ್ಯ ಎಂದ ಅವರು, ಹಿರಿಯರು ಕಟ್ಟಿದ ಮಾನವೀಯತೆಯ ಮೌಲ್ಯಗಳು ಇಂದಿನ ದಿನಮಾನಗಳಲ್ಲಿ ಕಾಣದಾಗಿದ್ದು, ಶಾಂತಿ, ನೆಮ್ಮದಿಯ ಜೀವನಕ್ಕೆ ಧಕ್ಕೆಯಾಗಿದೆ. ಹಾಗಾಗಿ ಪೋಷಕರು ಮಕ್ಕಳಿಗೆ ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುವಂತೆ ಹೇಳುವುದರ ಜೊತೆಗೆ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದ ಹೇಳಿದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿನೆಮಾ ನಿರ್ದೇಶಕ ಟಿ.ನಾಗಾಭರಣ, ಕಲಾವಿದ ಅಭಿನಯ, ರಾಜೇಶ್, ಪರಶುರಾಮ ದೊಡ್ಡಮನಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News