ಪೊಲೀಸ್ ಆಯುಕ್ತರಾದ ಪುಟಾಣಿಗಳು!

Update: 2019-09-09 18:09 GMT
ರಾಜಧಾನಿ ಬೆಂಗಳೂರು ನಗರದ ಸುರಕ್ಷತೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಮುಖ ಜವಾಬ್ದಾರಿಯುತ ನಗರ ಪೊಲೀಸ್ ಆಯುಕ್ತರ ಮಹತ್ವದ ಹುದ್ದೆಯನ್ನು ಐದು ಪುಟಾಣಿಗಳು ಅಧಿಕಾರ ಚಲಾಯಿಸುವ ಮೂಲಕ ಪೊಲೀಸ್ ಇತಿಹಾಸದ ಪುಟಕ್ಕೆ ಸೇರಿದರು. ಸೋಮವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮೇಕ್ ಎ ವಿಶ್ ಫೌಂಡೇಶನ್ ಹಾಗೂ ಬೆಂಗಳೂರು ಪೊಲೀಸರ ವತಿಯಿಂದ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮದಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐದು ಮಕ್ಕಳಿಗೆ ಪೊಲೀಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸಲಾಯಿತು. ನಾನಾ ಬಗೆಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐವರು ಪುಟಾಣಿಗಳು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ‘ಏಕ್ ದಿನ್ ಕಾ ಸುಲ್ತಾನ್’ ಎಂಬ ದಾಖಲಾತಿಯಲ್ಲಿ ಸಹಿ ಮಾಡುವ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಚಿಣ್ಣರ ಕೈ ಕುಲುಕಿ ಕಚೇರಿಗೆ ಬರಮಾಡಿ ಕೊಂಡರು. ಬಳಿಕ ಇವರೆಲ್ಲರಿಗೂ ಬೆಂಗಳೂರು ನಗರ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor