ಬೆಳಗಾವಿ: ನೆರೆ ಪರಿಹಾರ ಕೇಂದ್ರದಲ್ಲಿ ಬಾಲಕ ಮೃತ್ಯು

Update: 2019-09-10 08:35 GMT

ಬೆಳಗಾವಿ, ಸೆ.10: ನೆರೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬಾಲಕನೋರ್ವ ತೀವ್ರ ಜ್ವರದಿಂದ ಮೃತಪಟ್ಟ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ದೊಡ್ಡ ಹಂಪಿಹೊಳಿ ಗ್ರಾಮ ನಿವಾಸಿ ಅಬ್ದುಲ್ ಸಾಬ್ ಮುಲ್ಲಾನವರ(5) ಮೃತ ಬಾಲಕ. ಇತ್ತೀಚೆಗೆ ತೀವ್ರ ಪ್ರವಾಹಕ್ಕೆ ಸಿಲುಕಿ ಅಬ್ದುಲ್ ಸಾಬ್ ಅವರಿದ್ದ ಮನೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಅಬ್ದುಲ್ ಸಾಬ್ ಹಾಗೂ ಆತನ ಹೆತ್ತವರು ಸುರೇಬಾನ ಎಪಿಎಂಸಿ ಆವರಣದಲ್ಲಿನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇತ್ತೀಚೆಗೆ ಅಬ್ದುಲ್ ಸಾಬ್ ಗೆ ತೀವ್ರ ಜ್ವರ ಬಾಧಿಸಿತ್ತು. ಆತನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡಿದ್ದರು. ಈ ವೇಳೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ನಡುವೆ ಸೋಮವಾರ ರಾತ್ರಿ ಬಾಲಕ ಮೃತಪಟ್ಟಿದ್ದಾನೆ.

ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಅಬ್ದುಲ್ ಸಾಬ್ ಸಾವಿನ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರಧನ ಘೋಷಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಧವಳಗಿರಿ ನಿವಾಸದ ಬಳಿ ಮಾತನಾಡಿದ ಮುಖ್ಯಮಂತ್ರಿ, ಕಾಳಜಿ ಕೇಂದ್ರದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದೇವೆ. ಇವತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲಿದ್ದೇನೆ. ಬಾಲಕನ ಸಾವಿಗೆ ಕಾರಣ ಏನು ಅಂತ ತಿಳಿದುಕೊಂಡು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News