ಅಡಿಕೆ, ಕರಿಮೆಣಸು ಕಳವು ಪ್ರಕರಣ: ಇಬ್ಬರ ಬಂಧನ

Update: 2019-09-10 17:38 GMT

ಮಡಿಕೇರಿ, ಸೆ.10: ಕೊಡಗಿನ ಗಡಿಭಾಗ ಕರಿಕೆಯ ಅಂಗಡಿಯಲ್ಲಿ ದಾಸ್ತಾನಿರಿಸಿದ್ದ 40 ಚೀಲ ಅಡಿಕೆ ಹಾಗೂ 4 ಚೀಲ ಕರಿಮೆಣಸು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕಾಸರಗೋಡು ಜಿಲ್ಲೆಯ ಪಳ್ಳಿಕೆರೆ ನಿವಾಸಿ ಮುಹಮ್ಮದ್ ಸಲಾಂ (46) ಹಾಗೂ ಅರೆಯಾರಪಳ್ಳಂ ಕಲ್ಲಾರ್ ರಾಜಪುರಂನ ಕೆ.ರಮೇಶ್(38) ಎಂದು ಗುರುತಿಸಲಾಗಿದೆ.

ಕರಿಕೆಯ ವ್ಯಾಪಾರಿ ಎ.ಎಸ್.ರಫೀಕ್ ಎಂಬವರು ತಮ್ಮ ಅಂಗಡಿ ಕಟ್ಟಡದ ಕೋಣೆಯಲ್ಲಿ ಸುಮಾರು 2.75 ಲಕ್ಷ ರೂ. ಮೌಲ್ಯದ 40 ಚೀಲ ಅಡಿಕೆ ಮತ್ತು 4 ಚೀಲ ಕಾಳು ಮೆಣಸನ್ನು ದಾಸ್ತಾನು ಇರಿಸಿದ್ದರೆನ್ನಲಾಗಿದ್ದು, ಇದನ್ನು ಆ.30ರ ರಾತ್ರಿ ಕಳವು ಮಾಡಲಾಗಿತ್ತು. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಮತ್ತು ಕಳವು ಮಾಲು ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ ಪೆನ್ನೇಕರ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪ್ರಭಾರ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ತಂಡವು ತಾಂತ್ರಿಕ ವಿಧಾನ ಬಳಸಿ ಒಂದನೇ ಆರೋಪಿಯನ್ನು ಕಾಸರಗೋಡುವಿನ ಪಳ್ಳಿಕೆರೆ ಮತ್ತು ಎರಡನೇ ಆರೋಪಿಯನ್ನು ಸುಳ್ಯದ ಪೈಚಾರು ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಆರೋಪಿಗಳಿಂದ 2.75 ಲಕ್ಷ ರೂ. ಮೌಲ್ಯದ ಸೊತ್ತುಗಳು ಮತ್ತು 10 ಸಾವಿರ ರೂ.ನಗದು ಹಾಗೂ ಒಂದು ಮೊಬೈಲ್ ಫೋನ್‍ನ್ನು ವಶಪಡಿಸಿಕೊಂಡಿದೆ.

ಮಡಿಕೇರಿ ಉಪ ವಿಭಾಗದ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಕೆ.ಪಿ.ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ಪ್ರಭಾರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ  ವಿ.ಚೇತನ್, ಸಹಾಯಕ ಉಪ ನಿರೀಕ್ಷಕರಾದ ಉತ್ತಯ್ಯ, ಕೆ.ಜಿ.ಹೊನ್ನಪ್ಪ, ಸಿಬ್ಬಂದಿಗಳಾದ ತೀರ್ಥಕುಮಾರ್, ಇಬ್ರಾಹಿಂ ಕೆ.ಎ., ಹರೀಶ್, ಕೆ.ಕೆ.ದಿನೇಶ್,   ಸಿ.ಯು.ಚರ್ಮಣ, ಸುಂದರ ಟಿ, ರಾಘವೇಂದ್ರ ಎ.ಟಿ., ನಂಜುಂಡ ಎನ್.ಸಿ., ಪ್ರವೀಣ್ ಬಿ.ಕೆ., ಶರತ್ ರೈ ಬಿ.ಜೆ., ನಾಗರಾಜು ಎಸ್ ಕಡಗನ್ನವರ್,  ಮನೋಜ್ ಕೆ.ಬಿ., ಪರಮೇಶ್, ಮಹೇಶ್ ಮತು ಚಾಲಕರಾದ ನಾಗರಾಜು, ಭಾನು ಪ್ರಕಾಶ್ ಮತ್ತು ಅಯ್ಯಪ್ಪ ಅವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News