ಶಿವಮೊಗ್ಗದಿಂದ ಚೆನ್ನೈ, ತಿರುಪತಿಗೆ ನೇರ ರೈಲು ಸಂಚಾರಕ್ಕೆ ಇಲಾಖೆಯ ತಾತ್ವಿಕ ಅನುಮತಿ

Update: 2019-09-10 18:16 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಸೆ. 10: ಶಿವಮೊಗ್ಗದಿಂದ ಚೆನ್ನೈ ಹಾಗೂ ತಿರುಪತಿಗೆ ನೇರ ರೈಲು ಸೌಲಭ್ಯ ಕಲ್ಪಿಸಬೇಕೆಂಬ ಮಲೆನಾಡಿಗರ ಬಹು ದಿನಗಳ ಬೇಡಿಕೆಗೆ, ರೈಲ್ವೆ ಇಲಾಖೆ ಬಹುತೇಕ ಸಹಮತ ವ್ಯಕ್ತಪಡಿಸಿದೆ. ಆದಷ್ಟು ಶೀಘ್ರವಾಗಿ ಈ ಎರಡು ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ದೊರಕುವ ಸಾಧ್ಯತೆಗಳು ಕಂಡುಬರುತ್ತಿವೆ. 

ಹಾಗೆಯೇ ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರು ರೈಲ್ವೆ ನಿಲ್ದಾಣವನ್ನು, ಸ್ಯಾಟಲೈಟ್ ಸ್ಟೇಷನ್ ಆಗಿ ಮೇಲ್ದರ್ಜೆಗೇರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಇದರಿಂದ ಮುಖ್ಯ ರೈಲ್ವೆ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶವಾಗಲಿದೆ. 

ಸಭೆ: ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚೆನ್ನೈ, ತಿರುಪತಿ ರೈಲು ಸಂಚಾರ ಹಾಗೂ ಕೋಟೆಗಂಗೂರಿನಲ್ಲಿ ಸ್ಯಾಟಲೈಟ್ ನಿಲ್ದಾಣ ಅಭಿವೃದ್ದಿ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಹಲವು ಮಹತ್ವದ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. 
ಪ್ರಸ್ತುತ ಶಿವಮೊಗ್ಗ - ಯಶವಂತಪುರ ನಡುವೆ ಸಂಚರಿಸುತ್ತಿರುವ ಇಂಟರ್ ಸಿಟಿ ರೈಲನ್ನು, ಚೆನ್ನೈವರೆಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಶಿವಮೊಗ್ಗ - ತಿರುಪತಿ ನಡುವೆ ಪ್ರತ್ಯೇಕ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಈ ರೈಲನ್ನು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದ ಮೂಲಕ ಓಡಿಸಲು ಕೂಡ ನಿರ್ಧರಿಸಲಾಗಿದೆ. 

ಅನುಕೂಲ: ಚೆನ್ನೈ ಹಾಗೂ ತಿರುಪತಿಗೆ ರೈಲು ಸಂಚಾರದಿಂದ ಆ ಊರುಗಳಿಗೆ ಓಡಾಡುವ ಮಲೆನಾಡು ಹಾಗೂ ಕರಾವಳಿ ಭಾಗದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರಸ್ತುತ ಚೆನ್ನೈ, ತಿರುಪತಿಗೆ ರೈಲಿನಲ್ಲಿ ಹೋಗಬೇಕಾದರೆ ಬೆಂಗಳೂರು ಮತ್ತಿತರೆಡೆ ಈ ಭಾಗದ ಪ್ರಯಾಣಿಕರು ತೆರಳಬೇಕಾಗಿತ್ತು. 

ತಿರುಪತಿಗೆ ಓಡಿಸುವ ರೈಲನ್ನು ಚಿತ್ರದುರ್ಗ, ಬಳ್ಳಾರಿ ಮಾರ್ಗದ ಮೂಲಕ ಓಡಿಸಲು ನಿರ್ಧರಿಸಿರುವುದರಿಂದ ಮಲೆನಾಡಿನವರಿಗೆ ಬಯಲುಸೀಮೆಯ ಪ್ರದೇಶಗಳಿಗೂ ರೈಲ್ವೆ ಸಂಪರ್ಕ ಲಭ್ಯವಾಗಲಿರುವುದರಿಂದ ಸಾಕಷ್ಟು ಪ್ರಯೋಜನವಾಗಲಿದೆ. 

ಪ್ರಸ್ತುತ ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಹಲವು ಹೊಸ ಮಾರ್ಗಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಭವಿಷ್ಯದಲ್ಲಿ ರೈಲುಗಳ ಸಂಚಾರ ಹೆಚ್ಚಾಗಲಿದೆ. ಇದರಿಂದ ಹೊರವಲಯದಲ್ಲಿರುವ ಕೋಟೆಗಂಗೂರು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾಪ ಹಲವು ದಿನಗಳದ್ದಾಗಿತ್ತು. ಇದೀಗ ಸ್ಯಾಟಲೈಟ್ ಸ್ಟೇಷನ್ ಅಭಿವೃದ್ದಿಗೂ ಅನುಮತಿ ಲಭಿಸಿದೆ. ಇದರಿಂದ ಸುಗಮ ರೈಲು ಸಂಚಾರ ಹಾಗೂ ನಿಲುಗಡೆಗೆ ಅನುಕೂಲವಾಗಲಿದೆ. 

ಅನುಮೋದನೆ: ಉಳಿದಂತೆ ಸಿಎಂ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲೆಯ ಹಲವು ರೈಲ್ವೆ ಯೋಜನೆಗಳ ಅನುಷ್ಠಾನದ ಕುರಿತಂತೆ ಚರ್ಚಿಸಲಾಗಿದೆ. ಸ್ಥಗಿತಗೊಂಡಿದ್ದ ಶಿವಮೊಗ್ಗ - ಬೀರೂರು ಡಬ್ಲಿಂಗ್ ಕಾರ್ಯಕ್ಕೆ ಚಾಲನೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಡಬ್ಲಿಂಗ್ ಕಾರ್ಯ ಪೂರ್ಣಗೊಂಡರೆ, ಬೆಂಗಳೂರು - ಶಿವಮೊಗ್ಗ ನಡುವಿನ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. 

ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನಡುವೆ ಮಾರ್ಗ ನಿರ್ಮಾಣ ಆರಂಭಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ಈ ಮಾರ್ಗ ನಿರ್ಮಾಣಕ್ಕೆ ಸುಮಾರು 930 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಾಗೆಯೇ ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದ ಬಳಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಜಾಗ ನೀಡಲು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. 

ಶಿವಮೊಗ್ಗ-ಹರಿಹರ, ಶಿವಮೊಗ್ಗ-ಮಂಗಳೂರು, ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಾಣ ನೆನೆಗುದಿಗೆ

ಈಗಾಗಲೇ ಶಿವಮೊಗ್ಗ-ಹರಿಹರ ನಡುವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸರ್ವೇ ಕಾರ್ಯ ಕೂಡ ಪೂರ್ಣಗೊಂಡಿದೆ. ಹಳಿಗಳ ನಿರ್ಮಾಣಕ್ಕೆ ಈ ಹಿಂದಿನ ಬಜೆಟ್‍ನಲ್ಲಿ ಅನುದಾನ ಕೂಡ ಮೀಸಲಿರಿಸಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸಿಲ್ಲ. ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾದೀನಪಡಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದ ಈ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಈ ನಡುವೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಸಾಕಷ್ಟು ಆಸಕ್ತಿ ವಹಿಸಿರುವುದರಿಂದ, ಶಿವಮೊಗ್ಗ-ಹರಿಹರ ಮಾರ್ಗ ನಿರ್ಮಾಣ ಅನುಷ್ಠಾನ ಸಾಧ್ಯತೆಗಳು ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿವೆ. 

ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಿಸಿ, ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸಬೇಕು ಎಂಬುವುದು ಬಹು ಹಿಂದಿನ ಬೇಡಿಕೆಯಾಗಿದೆ. ಆದರೆ ದಟ್ಟ ಅರಣ್ಯದ ಕಾರಣದಿಂದ ಯೋಜನೆ ಅನುಷ್ಠಾನವಾಗುತ್ತಿಲ್ಲ. ಅರಣ್ಯ ಸಂಪತ್ತು ಉಳಿಸಿಕೊಂಡು ಭೂಗತ ಮಾರ್ಗ ನಿರ್ಮಿಸುವ ಯೋಜನೆಯಿತ್ತು. ಆದರೆ ಇದಕ್ಕೆ ಸಾವಿರಾರು ಕೋಟಿ ರೂ. ವೆಚ್ಚವಾಗುವ ಕಾರಣದಿಂದ ಕೇಂದ್ರ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ. ಇದರಿಂದ ಈ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.

ರಾಜ್ಯದವರೇ ಆದ ಡಿ.ವಿ.ಸದಾನಂದಗೌಡರವರು ಕೇಂದ್ರ ರೈಲ್ವೆ ಸಚಿವರಾಗಿದ್ದ ವೇಳೆ, ಶಿವಮೊಗ್ಗ-ಮಂಗಳೂರು ಮಾರ್ಗ ನಿರ್ಮಾಣದ ಘೋಷಣೆ ಮಾಡಿದ್ದರು. ಸರ್ವೇಗೂ ಕೂಡ ಆದೇಶಿಸಿದ್ದರು. ಆದರೆ ನಂತರ ಬಂದ ರೈಲ್ವೆ ಸಚಿವರು ಈ ಯೋಜನೆಯ ಬಗ್ಗೆ ಚಿತ್ತ ಹರಿಸಲಿಲ್ಲ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾರ್ಗ ಹಾದು ಹೋಗುವುದರಿಂದ, ಅರಣ್ಯ ಹಾಗೂ ಪರಿಸರ ಇಲಾಖೆಗಳ ಅನುಮತಿ ದೊರಕುವುದು ಅಸಾಧ್ಯವೆಂಬ ಕಾರಣದಿಂದ ರೈಲ್ವೆ ಇಲಾಖೆಯು ಯೋಜನೆ ಅನುಷ್ಠಾನಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. 

ಹೊಸ ರೈಲುಗಳಿಂದ ಅನುಕೂಲ: ಕೆ.ಪಿ.ಪುರುಷೋತ್ತಮ್
ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಇಲಾಖೆ ಸಚಿವ ಸುರೇಶ್ ಅಂಗಡಿಯವರು ಭಾಗವಹಿಸಿದ್ದರು. ಸಭೆಯಲ್ಲಿ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಹಲವು ಪ್ರಮುಖ ರೈಲ್ವೆ ಯೋಜನೆಗಳ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಶಿವಮೊಗ್ಗದಿಂದ ಚೆನ್ನೈ, ತಿರುಪತಿಗೆ ರೈಲು ಓಡಿಸಲು ರೈಲ್ವೆ ಸಚಿವರು ತಾತ್ವಿಕ ಅನುಮತಿ ನೀಡಿದ್ದಾರೆ. ಕೋಟೆಗಂಗೂರು ನಿಲ್ದಾಣವನ್ನು ಸ್ಯಾಟಲೈಟ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ದೊರೆತಿದೆ. ಇದರಿಂದ ಈ ಭಾಗದ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ' ಎಂದು ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಕೆ.ಪಿ.ಪುರುಷೋತ್ತಮ್‍ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News