ಒಕ್ಕಲಿಗ ಸಮುದಾಯವನ್ನು ತುಳಿಯುತ್ತಿದ್ದಾರೆ: ಮಾಜಿ ಸಚಿವ ಶ್ರೀನಿವಾಸ್

Update: 2019-09-10 18:25 GMT

ತುಮಕೂರು, ಸೆ.10: ಒಕ್ಕಲಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಬೇರೆ ಸಮುದಾಯದವರಿಗೆ ಆಗಿದ್ದರೆ, ಸಂಘಟಿತರಾಗಿ ಹೋರಾಡುತ್ತಿದ್ದರು. ಆದರೆ ಒಕ್ಕಲಿಗ ಸಮುದಾಯವನ್ನು ತುಳಿಯುವ ಯತ್ನ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯವು ಮಲಗಿದೆ. ಇದೇ ಮನೋಸ್ಥಿತಿ ಮುಂದುವರೆದರೆ ಸಮಾಜ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ನಗರದ ಕುಂಚಿಟಿಗರ ಸಮುದಾಯಭವನದಲ್ಲಿ ನಡೆದ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಏರ್ಪಡಿಸಿದ್ದ 11ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿದ ಕ್ಷಣದಿಂದ ವಿಧಾನಸೌಧದಲ್ಲಿ ಒಕ್ಕಲಿಗ ಸಮುದಾಯದ ನೌಕರರಿಗೆ ಆಗಿರುವ ತೊಂದರೆಯನ್ನು ಅರಿತುಕೊಳ್ಳಬೇಕಿದೆ. ದೇಶದಲ್ಲಿ ಯಾರು ಮಾಡದೇ ಇರುವುದನ್ನು ಡಿ.ಕೆ.ಶಿವಕುಮಾರ್ ಅವರು ಮಾಡಿದ್ದಾರೆಯೇ? ವೀರಶೈವ-ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರಿಗೆ ಸಿಎಂ ಪದವಿ ತಪ್ಪಿದ ತಕ್ಷಣವೇ ರಾಜ್ಯದಲ್ಲಿ ಹೋರಾಟ ಶುರುವಾದವು. ಆದರೆ ಜಿಲ್ಲೆಯಲ್ಲಿ ದೇವೇಗೌಡರು ಸೋತರು, ಕುಮಾರಸ್ವಾಮಿ ಅವರನ್ನು ಕುತಂತ್ರದಿಂದ ಅಧಿಕಾರದಿಂದ ಕೆಳಗಿಸಿದರೂ, ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದರೂ ಅವರ ಪರವಾಗಿ ಸಮುದಾಯದವರು ಯಾರು ಮಾತನಾಡಲಿಲ್ಲ. ಇದು ನಮ್ಮಲ್ಲಿರುವ ಒಡಕನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಒಕ್ಕಲಿಗ ಸಮುದಾಯವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ನಿವೃತ್ತರು ಹಾಗೂ ಅಧಿಕಾರಿಗಳು ಮುಂದಾಗಬೇಕಿದೆ. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಸಮಾಜದ ಹಿತ ಕಾಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದ್ದು, ಸಮಾಜದ ಋಣವನ್ನು ತೀರಿಸುವ ನಿಟ್ಟಿನಲ್ಲಿ ಸಮಾಜದ ಕೆಲಸವನ್ನು ಮಾಡಬೇಕೆಂದ ಅವರು, ಇಂದು ಸಮಾಜ ಕಲುಷಿತವಾಗಿದ್ದು, ವಿಧಾನಸೌಧದಲ್ಲಿ ಕುಳಿತು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತಿಲ್ಲ, ಶಾಸಕನೆಂದು ಹೇಳಿಕೊಳ್ಳಲು ಮುಜುಗರವಾಗುತ್ತದೆ ಎಂದರು.

ಸ್ವಹಿತಕ್ಕಾಗಿ ಜನರು ನೀಡಿದ ಹುದ್ದೆಯನ್ನು ಮಾರಾಟ ಮಾಡಿದರು, ದುಡ್ಡಿದ್ದವರು ಇಂದು ವಿಧಾನಸೌಧಕ್ಕೆ ಹೋಗುತ್ತಿದ್ದಾರೆ. ಲಾಭದ ಆಸೆಯಿಂದ ಅಧಿಕಾರವನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ರಾಜಕಾರಣಿಗಳು ಕೀಳಾಗಿ ನಡೆದುಕೊಳ್ಳುವ ಮೂಲಕ ಸಮಾಜಕ್ಕೆ ಕೆಟ್ಟದ್ದನ್ನು ತೋರಿಸುತ್ತಿದ್ದೇವೆ. ಸಮಾಜ ಮುಖಿ ಕೆಲಸ ನಮ್ಮ ಜವಾಬ್ದಾರಿ ಎನ್ನುವುದನ್ನು ಮರೆತು ವರ್ತಿಸುತ್ತಿದ್ದೇವೆ. ನಮ್ಮ ಜವಾಬ್ದಾರಿಯನ್ನು ಮರೆತಿರುವುದರಿಂದಲೇ ಕೆಟ್ಟ ಸಮಾಜ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ವಿದ್ಯೆಯಿಂದ ಮಾತ್ರ ಸ್ವಾವಲಂಬನೆ ಸಾಧಿಸಬಹುದು. ವಿದ್ಯೆಯಿಂದ ಮಾತ್ರ ಉನ್ನತ ಅಧಿಕಾರವನ್ನು ಪಡೆಯಬಹುದು ಎಂಬ ಗುರಿಯನ್ನು ಹೊಂದಿ ವ್ಯಾಸಂಗ ಮಾಡಬೇಕೆಂದ ಅವರು, ಮಾಧ್ಯಮಗಳು ಇಂದು ಭ್ರಷ್ಟಗೊಂಡಿವೆ. ಸಮಾಜದಲ್ಲಿ ನಡೆಯುತ್ತಿರುವ ಸತ್ಯವನ್ನು ತೋರಿಸುತ್ತಿಲ್ಲ. ದೇಶದ ಆರ್ಥಿಕತೆ ಕುರಿತು ಮಾಜಿ ಪಿಎಂ ಮನಮೋಹನ್ ಸಿಂಗ್ ಮಾತನಾಡಿದರು. ಅದನ್ನು ಮಾಧ್ಯಮಗಳು ಪ್ರಕಟಿಸುತ್ತಿಲ್ಲ ಎಂದರೆ ದೇಶ ಎತ್ತ ಸಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮುದಾಯಕ್ಕೆ ಎದುರಾಗಿರುವ ಗಂಡಾಂತರದಿಂದ ಪಾರಾಗಬೇಕಾದರೆ, ಪಂಗಡಗಳನ್ನು ಮರೆತು ಒಂದಾಗಬೇಕಿದೆ. ವಿದ್ಯಾರ್ಥಿಗಳು ಉನ್ನತ ಆಡಳಿತಾಧಿಕಾರ ಪಡೆಯುವ ನಿಟ್ಟಿನಲ್ಲಿ ಅಗತ್ಯ ತರಬೇತಿಯನ್ನು ಪಡೆಯುವ ಮೂಲಕ ಅಧಿಕಾರಿಗಳಾಗುವ ಗುರಿಯನ್ನು ಹೊಂದಬೇಕಿದ್ದು, ಒಕ್ಕಲಿಗ ಸಮುದಾಯದ ಸಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ದೆಹಲಿಯಲ್ಲಿ ವ್ಯಾಸಂಗ ಮಾಡಲು ಹೋಗುವ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮಠದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಆದಿಚುಂಚನಗಿರಿ ಶಾಖಾಮಠದ ಶ್ರೀ ಮಂಗಳನಾಥಸ್ವಾಮೀಜಿ ಮಾತನಾಡಿ, ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು, ಅಂಕಗಳನ್ನು ಪಡೆಯುವುದೇ ಮುಖ್ಯವಲ್ಲ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆತ್ಮಸ್ಥೈರ್ಯ ಪಡೆದುಕೊಳ್ಳಬೇಕು. ಉನ್ನತ ಅಧಿಕಾರ ಪಡೆದ ನಂತರವೂ ಆತ್ಮಸ್ಥೈರ್ಯವನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವುದು ಶೋಚನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಒಕ್ಕಲಿಗರ ನೌಕರರ ವೇದಿಕೆಯ ಮುಖಂಡರಾದ ರಂಗಪ್ಪ, ಬೋರೇಗೌಡ ಸೇರಿದಂತೆ ಇತರರು ಮಾತನಾಡಿದರು, ಪಿಯುಸಿ ಮತ್ತು ಎಸ್ಸೆಸ್ಸಿಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆಯ ಅಧ್ಯಕ್ಷ ಶಂಕರ್, ಆಡಿಟರ್ ನಾಗರಾಜ್, ವೃತ್ತ ನಿರೀಕ್ಷಕ ಚಂದ್ರಶೇಖರ್, ಪಾಲಿಕೆ ಸದಸ್ಯರಾದ ಶ್ರೀನಿವಾಸಮೂರ್ತಿ, ಸುಜಾತ ನಂಜೇಗೌಡ, ನರಸಿಂಹಮೂರ್ತಿ, ಗಿರೀಶ್, ವೈ.ಪಿ.ಲಕ್ಕಪ್ಪ, ದೇವೇಂದ್ರ, ಎಂ.ಸಿ.ವೀರಯ್ಯ, ಅಶ್ವತ್ಥ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News