ವಾಹನ ಸವಾರರು ನಿರಾಳ: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಕೆಗೆ ಸಿಎಂ ಸೂಚನೆ

Update: 2019-09-11 14:08 GMT

ಬೆಂಗಳೂರು, ಸೆ.11: ಕೇಂದ್ರ ಸರಕಾರದ ನೂತನ ಮೋಟಾರು ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ, ಗುಜರಾತ್ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ದಂಡ ಪ್ರಮಾಣ ಇಳಿಕೆಗೆ ನಿರ್ಧರಿಸಲಾಗಿದೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಾರಿಗೆ, ವಾಣಿಜ್ಯ ತೆರಿಗೆ, ಅಬಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯವನ್ನು ಪ್ರಕಟಿಸಿದರು.

ಸಂಚಾರ ನಿಯಮ ಹಾಗೂ ಮೋಟಾರು ವಾಹನ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಇಳಿಸುವ ಬಗ್ಗೆ ಗುಜರಾತ್ ಸರಕಾರ ಹೊರಡಿಸಿರುವ ಆದೇಶವನ್ನು ತರಿಸಿಕೊಂಡು ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಗುಜರಾತ್‌ನಲ್ಲಿನ ಪರಿಷ್ಕೃತ ದಂಡದ ದರ?: ಕೇಂದ್ರ ಸರಕಾರ ಸೆ.1ರಿಂದ ಜಾರಿ ಮಾಡಿರುವ ಹೊಸ ಮೋಟಾರು ವಾಹನ ಕಾಯ್ದೆ ಅನ್ವಯ ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸದಿದ್ದರೆ 1 ಸಾವಿರ ರೂ.ದಂಡ ನಿಗದಿ ಮಾಡಲಾಗಿತ್ತು. ಗುಜರಾತ್ ಸರಕಾರ ದಂಡದ ಮೊತ್ತವನ್ನು ಪರಿಷ್ಕರಿಸಿದ್ದು ಅದನ್ನು 500 ರೂ.ಗಳಿಗೆ ಇಳಿಸಿದೆ.

ಅದೇ ರೀತಿ, ಕಾರು ಚಾಲನೆ ವೇಳೆ ಚಾಲಕ ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ರೂ.ಬದಲಾಗಿ 500 ರೂ., ಚಾಲನ ಪರವಾನಗಿ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ.

ಚಾಲನ ಪರವಾನಗಿ, ಆರ್.ಸಿ., ವಿಮೆ ಇಲ್ಲದಿದ್ದರೆ ಮೊದಲ ಬಾರಿಗೆ 500 ರೂ., ಎರಡನೆ ಬಾರಿಗೆ ಈ ಕೇಂದ್ರ ಸರಕಾರದ ಕಾಯ್ದೆಯಂತೆಯೇ ದಂಡ ಅನ್ವಯವಾಗಲಿದೆ. ದ್ವಿಚಕ್ರ ವಾಹನದಲ್ಲಿ ಎರಡಕ್ಕಿಂತ ಹೆಚ್ಚಿನ ಜನ ಸಂಚರಿಸಿದರೆ ವಿಧಿಸಲಾಗುತ್ತಿದ್ದ 1 ಸಾವಿರ ರೂ.ದಂಡವನ್ನು 100 ರೂ. ಮಾಡಲಾಗಿದೆ.

ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಲಾಗಿದ್ದ 10 ಸಾವಿರ ರೂ.ದಂಡವನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಹಾಗೂ ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News