ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ರಾಜಕೀಯ ಪಕ್ವತೆಯೇ ಇಲ್ಲ: ಮಾಜಿ ಸಚಿವ ಎಸ್.ಆರ್.ಪಾಟೀಲ್

Update: 2019-09-11 15:01 GMT

ಬಾಗಲಕೋಟೆ, ಸೆ. 11: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜಕೀಯ ಪರಿಪಕ್ವತೆಯೂ ಇಲ್ಲ. ಐಟಿ ಮತ್ತು ಈಡಿ ಸಂಸ್ಥೆಗಳು ಕೇಂದ್ರ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತವೆಂಬ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಂಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂಬ ಕಟೀಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಟೀಲ್ ಎಷ್ಟು ಅಪ್ರಬುದ್ಧರೆಂದು ಅವರ ಈ ಹೇಳಿಕೆಯಿಂದಲೇ ಗೊತ್ತಾಗುತ್ತದೆ ಎಂದು ಟೀಕಿಸಿದರು.

ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ, ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸುತ್ತೇವೆ ಎಂಬುದು ಅವರ ಭ್ರಮೆಯಷ್ಟೇ. ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಯಾವುದೇ ಕಾರಣಕ್ಕೂ ಕುಗ್ಗಿಸಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂಬ ಬಿಜೆಪಿ ನಾಯಕರ ವರ್ತನೆ ತಿರುಕನ ಕನಸು ಎಂದು ಲೇವಡಿ ಮಾಡಿದರು.

ಕರ್ನಾಟಕವೂ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿರುವ ಒಂದು ರಾಜ್ಯ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಗುಜರಾತ್‌ನವರೆ ಆಗಿದ್ದರೂ ಅಲ್ಲಿ ದಂಡವನ್ನು ಶೇ.50ರಷ್ಟು ಇಳಿಸಿದ್ದಾರೆ. ಅದು ನಮ್ಮ ರಾಜ್ಯಕ್ಕೂ ಅನ್ವಯವಾಗಬೇಕು. ದಂಡ ಹೆಚ್ಚು ಹಾಕುವುದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಇದು ಅಧಿಕಾರಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಅವರು ನೂತನ ಮೋಟಾರ್ ವಾಹನ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News