ಗಣೇಶ ವಿಸರ್ಜನೆ ವೇಳೆ ಜಗಳ: ಮೂವರಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು

Update: 2019-09-11 17:15 GMT

ಹಾಸನ, ಸೆ.11: ಗಣಪತಿ ವಿಸರ್ಜನೆ ವೇಳೆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಗಲಾಟೆ ನಡೆದು ಮೂವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಟ್ಟಾಯ ಹೋಬಳಿ ಹುಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ಹುಲ್ಲಹಳ್ಳಿ ನರಸಿಂಹೇಗೌಡ, ಮಧು, ಸಾಗರ್ ಎಂಬುವವರ ಮೇಲೆ ಅದೇ ಗ್ರಾಮದ ಹೇಮಂತ್‍ ಕುಮಾರ್, ರಘು, ರವಿ, ಚಂದ್ರಶೇಖರ್ ಎಂಬುವವರು ಚಾಕು ಹಾಗೂ ಕಲ್ಲಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಮಧು ಎಂಬಾತ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರಸಿಂಹೇಗೌಡ ಹಾಗೂ ಸಾಗರ್ ಎಂಬವರಿಗೂ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಗಣೇಶ ಮೂರ್ತಿ ವಿಸರ್ಜನೆ ವೇಳೆ ಅನಗತ್ಯ ಗಲಾಟೆ ಎಬ್ಬಿಸಿ ಆರೋಪಿಗಳು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಗೊರೂರು ಠಾಣೆಯಲ್ಲಿ ಆರೋಪಿಗಳ ಮೇಲೆ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News