ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ !

Update: 2019-09-12 14:18 GMT
ಸಚಿವ ಸುರೇಶ್‌ ಕುಮಾರ್

ಬೆಂಗಳೂರು, ಸೆ.12: ಮಧ್ಯಾಹ್ನದ ಬಿಸಿಯೂಟವನ್ನು ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಪ್ರಸ್ತಾಪದ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ತಿಳಿಸಿದ್ದಾರೆ. 

ನಗರದ ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅದಮ್ಯ ಚೇತನ ಮಧ್ಯಾಹ್ನದ ಬಿಸಿಯೂಟ ಪಡೆಯುವ ಸರಕಾರಿ ಹಾಗೂ ಅನುದಾನಿತ ಮಕ್ಕಳಿಗೆ ಸಾಯಿಶ್ಯೂರ್ ಪೌಷ್ಟಿಕಾಂಶಯುಕ್ತ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅದಮ್ಯ ಚೇತನ ಹಾಗೂ ಮುದ್ದೇನಹಳ್ಳೀಯ ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು. ಹಾಗೂ ಕಾಲೇಜು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅದಮ್ಯ ಚೇತನ ಮಧ್ಯಾಹ್ನದ ಊಟದ ಕಾರ್ಯಕ್ರಮಕ್ಕೆ ಒಂದು ಸ್ವರೂಪ ನೀಡಿದೆ. ಕೇವಲ ಊಟವಲ್ಲ, ಪ್ರೀತಿಯಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಜೊತೆಗೂಡಿ ಪೌಷ್ಟಿಕಾಂಶ ನೀಡುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್, ಸಾಯಿ ಅನ್ನಪೂರ್ಣ ಟ್ರಸ್ಟಿನ ಟ್ರಸ್ಟಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News