ರಷ್ಯಾಗೆ 7,000 ಕೋಟಿ ನೀಡಿದ ಮೋದಿ ರಾಜ್ಯದ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿಲ್ಲ: ಕುಮಾರಸ್ವಾಮಿ

Update: 2019-09-12 14:43 GMT

ಬೆಂಗಳೂರು, ಸೆ.12: ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ ಜನರು ಮನೆ, ಮಠ ಕಳೆದುಕೊಂಡು ಸಂತ್ರಸ್ತರ ಶಿಬಿರ ಸೇರಿಕೊಂಡಿದ್ದಾರೆ. ಸರಕಾರದಿಂದ ತಾತ್ಕಾಲಿಕ ಮನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ವಸತಿ ಕಲ್ಪಿಸಬೇಕಾದ ಸಚಿವರು ಮಾತ್ರ ಅವರ ಬಗ್ಗೆ ಕಾಳಜಿ ಇಲ್ಲದಂತೆ ದಸರಾ ಸಂಭ್ರಮದಲ್ಲಿ ಮುಳುಗಿದ್ದಾರೆ ಎಂದು ಸಚಿವ ವಿ. ಸೋಮಣ್ಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 

ಗುರುವಾರ ನಗರದಲ್ಲಿ ಜೆಡಿಎಸ್ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಸರಕಾರ ನೆರೆಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವಸತಿ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಯಾರಿಗೆ ಖಾತೆ ಹಂಚಿಕೆಯಾಗಿದೆಯೋ ಎಂಬ ಅನುಮಾನ ಮೂಡುತ್ತದೆ. ವಸತಿ ಸಚಿವರು ದಸರಾ ಸಚಿವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ದಸರಾಗೆ ಒಬ್ಬ ಮಂತ್ರಿ ತಲೆಕೆಡಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಉತ್ತರ ಕರ್ನಾಟಕ ಪಾಲಿಗೆ ವಸತಿ ಸಚಿವರೇ ಇಲ್ಲ. ಅಲ್ಲಿ ಅವರಿಗೆ ಶೆಡ್ ನಿರ್ಮಿಸುವಂತೆ ಸೂಚನೆ ನೀಡಲೂ ಸಚಿವರು ಹೋಗಿಲ್ಲ. ದಸರಾವನ್ನು ಅಧಿಕಾರಿಗಳು ಮಾಡುತ್ತಾರೆ. ಅದಕ್ಕೆ ಅವರು ಸಮರ್ಥರಿದ್ದಾರೆ. ವಸತಿ ಸಚಿವರು ಇನ್ನಾದರೂ ದಯಮಾಡಿ ನೆರೆ ಪ್ರದೇಶಗಳಿಗೆ ಹೋಗಿ, ನೆರೆ ಸಂತ್ರಸ್ತರಿಗೆ ಮನೆ ಕಲ್ಪಿಸುವ ಬಗ್ಗೆ ಚಿಂತಿಸಬೇಕು ಎಂದು ವಿ. ಸೋಮಣ್ಣಗೆ ಹೆಚ್ಡಿಕೆ ಮನವಿ ಮಾಡಿದರು.

ರಾಜ್ಯದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸರಕಾರ ಇದ್ದಿದ್ದರೆ ಎಲ್ಲಿದ್ದೀಯಪ್ಪ ಕುಮಾರ ಅಂತಿದ್ದರು. ಆದರೆ ಇವರು ಮಾತ್ರ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲದಂತೆ, ಏನೂ ಮಾಡದೆ ಸುಮ್ಮನಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು.

ರಾಜ್ಯದ ನೆರೆ ಪರಿಸ್ಥಿತಿ ಕುರಿತು ಕೇಂದ್ರ ಸಚಿವರು ಈಗಾಗಲೇ ಪರಿಶೀಲನೆ ಮಾಡಿದ್ದಾರೆ. ಆದರೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಪ್ರಧಾನಿಗಳಿಗೆ ರಷ್ಯಾಗೆ ಹೋಗಿ 7 ಸಾವಿರ ಕೋಟಿ ಅನುದಾನ ನೀಡಲು ಸಮಯವಿದೆ. ಆದರೆ ಕರ್ನಾಟಕದಲ್ಲಿ ಆಗಿರುವ ಅನಾಹುತಕ್ಕೆ ಹಣಕೊಡುವ ಔದಾರ್ಯ ತೋರಿಲ್ಲ. ಇದು ಬಿಜೆಪಿ ಸರಕಾರಕ್ಕೆ ಕರ್ನಾಟಕದ ಮೇಲಿರುವ ಪ್ರೀತಿ ಎಂದು ಅವರು ಟೀಕಿಸಿದರು. 

ಜಿಟಿಡಿಯಿಂದ ದಸರಾ ಅನುಭವದ ಧಾರೆ:

ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಪದೇ ಪದೇ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ಸಭೆಗೆ ಗೈರಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವೇ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿ ನಾಯಕರ ಬಳಿ ಬಿಟ್ಟಿದ್ದೇವೆ. ಕಳೆದ ವರ್ಷ ದಸರಾ ಯಶಸ್ವಿಯಾಗಿ ಮಾಡಿದ್ದರು. ಆ ದಸರಾ ಅನುಭವ ಧಾರೆ ಎರೆಯಲು ಬಿಟ್ಟಿದ್ದೇವೆ. ಅಲ್ಲದೇ ಸಭೆ ಕರೆದಿರುವುದು ಮೈಸೂರು ನಗರ ಭಾಗಕ್ಕೆ. ಜಿಟಿಡಿ ಅವರು ಗ್ರಾಮೀಣ ಭಾಗಕ್ಕೆ ಸೇರಿದವರು. ಹೀಗಾಗಿ, ಅವರನ್ನು ಸಭೆಗೆ ಕರೆದಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News