ರಾಜ್ಯದ ದೇವಾಲಯಗಳು ಇನ್ನು ಸ್ಮಾರ್ಟ್: ಭಕ್ತರ ಅನುಕೂಲಕ್ಕಾಗಿ ‘ಇ-ಹುಂಡಿ’ ವ್ಯವಸ್ಥೆ

Update: 2019-09-12 14:54 GMT

ಬೆಂಗಳೂರು, ಸೆ. 12: ರಾಜ್ಯದ ಹತ್ತರಿಂದ ಹದಿನೈದು ‘ಎ’ ದರ್ಜೆ ದೇವಾಲಯಗಳಲ್ಲಿ ಪ್ರಾಯೋಗಿಕವಾಗಿ ‘ಇ-ಹುಂಡಿ’ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ‘ಇ-ಹುಂಡಿ’ ಪ್ರಾತ್ಯಕ್ಷತೆ ವೀಕ್ಷಿಸಿ, ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಳಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿರುವ ಇ-ಹುಂಡಿ ವ್ಯವಸ್ಥೆ ಯಶಸ್ವಿಯಾದರೆ ರಾಜ್ಯದ ‘ಎ’ ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಳವಡಿಸಲಾಗುವುದು ಎಂದರು.

ದೇವಸ್ಥಾನಕ್ಕೆ ಸಾರ್ವಜನಿಕರು ನೀಡುವ ಹಣ, ಒಡೆವೆ ಸೇರಿದಂತೆ ಇನ್ನಿತರ ವಸ್ತುಗಳ ದುರ್ಬಳಕೆ ತಡೆಗೆ ಇದರಿಂದ ಅನುಕೂಲವಾಗಲಿದೆ ಎಂದ ಅವರು, ಭಕ್ತರಿಗೆ ತಾವು ನೀಡಿದ ಹಣ ಸಮರ್ಪಕವಾಗಿ ತಲುಪಿದೆ ಎಂಬುದು ಖಾತ್ರಿಪಡಿಸುವುದರ ಜತೆಗೆ ಸುಲಭವಾಗಿ ಸೇವೆಗಳನ್ನು ಇದರಿಂದ ಒದಗಿಸಲು ಸಾಧ್ಯ ಎಂದರು.

ಎಟಿಎಂ ಮಾದರಿ: ಇ-ಹುಂಡಿ ವ್ಯವಸ್ಥೆ ಎಟಿಎಂ ಮಾದರಿಯಲ್ಲೆ ಕಾರ್ಯ ನಿರ್ವಹಿಸಲಿದೆ. ಭಕ್ತರು ತಮ್ಮ ಕಾಣಿಕೆಯನ್ನು ನೇರವಾಗಿ ಇ-ಹುಂಡಿಗೆ ಹಾಕಬಹುದು. ಕಾಣಿಕೆ ನೀಡಲು ಯಾವುದೇ ವ್ಯಕ್ತಿಗಳ ಅವಶ್ಯಕತೆ ಇರುವುದಿಲ್ಲ. ಭಕ್ತರು ಇ-ಹುಂಡಿಗೆ ಕಾಣಿಕೆ ಹಾಕಿದರೆ, ನಿಮ್ಮ ಹೆಸರು ಸಮೇತ ಮಾಹಿತಿ ರಸೀದಿ ತಕ್ಷಣ ಲಭ್ಯವಾಗುತ್ತದೆ. ಕಾಣಿಕೆ ಮೊತ್ತದ ವಿವರವೂ ಸಿಗಲಿದೆ ಎಂದು ಹೇಳಿದರು.

ಭಕ್ತರು ಇ-ಹುಂಡಿಯಲ್ಲಿ ಹಾಕಿದ ಹಣ ನೇರವಾಗಿ ದೇವಸ್ಥಾನ ಖಾತೆಗೆ ಜಮೆ ಆಗುತ್ತದೆ. ಸಂಜೆ ಜಮೆಯಾಗಿರುವ ಹಣದ ಮಾಹಿತಿ ದೇವಸ್ಥಾನದ ಖಾತೆ ಇರುವ ಬ್ಯಾಂಕ್‌ಗೆ ಪಾವತಿಯಾಗುತ್ತದೆ. ಇ-ಹುಂಡಿಯ ಮೂಲಕ ವಿವಿಧ ಸೇವೆಗಳನ್ನು ಬುಕ್ ಮಾಡುವ ವ್ಯವಸ್ಥೆ ದೊರೆಯಲಿದೆ. ತಮ್ಮ ಅಪೇಕ್ಷೆಯ ಪೂಜೆ, ಸೇವಾ ಕೈಂಕರ್ಯಕ್ಕೆ ಅನುಕೂವಾಗಲಿದೆ ಎಂದು ಅವರು ತಿಳಿಸಿದರು.

ಆಸ್ತಿಗಳ ಸರಂಕ್ಷಣೆ: ಮುಜರಾಯಿ ಇಲಾಖೆ ದೇವಸ್ಥಾನದ ಆಸ್ತಿಗಳ ಒತ್ತುವರಿ ತೆರವು ಮತ್ತು ಆಸ್ತಿಗಳ ಸಂರಕ್ಷಣೆಗಾಗಿ ಶೀಘ್ರದಲ್ಲೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ವಿವರ ನೀಡಿದರು.

ಅನುವಂಶಿಕವಾಗಿ ಪೂಜಾ ಕೈಂಕರ್ಯದಲ್ಲಿನ ದೇವಸ್ಥಾನಗಳ ಮೇಲುಸ್ತುವಾರಿ, ಭಕ್ತರು ನೀಡುವ ದೇಣಿಗೆ ಸೇರಿ ಇನ್ನಿತರ ವಿಚಾರಗಳ ಪರಿಶೀಲನೆಗೆ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದ ಅವರು, ಸಿ ಮತ್ತು ಡಿ ವರ್ಗದ ದೇವಸ್ಥಾನಗಳಲ್ಲಿಯೂ ಧಾರ್ಮಿಕ ಪರಿಷತ್ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಮಳೆ ಮತ್ತು ನೆರೆಯಿಂದ ಆಗಿರುವ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯ ಸರಕಾರ ನೆರೆ ಪರಿಹಾರಕ್ಕೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರದಿಂದ ಗರಿಷ್ಠ ಮೊತ್ತದ ಪರಿಹಾರದ ನಿರೀಕ್ಷೆ ಇದೆ. ನೆರೆ ಸಂತ್ರಸ್ತರು ಆತಂಕಪಡುವ ಅಗತ್ಯವಿಲ್ಲ’

-ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News