ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ: ಯಡಿಯೂರಪ್ಪ

Update: 2019-09-12 18:03 GMT

ಚಿಕ್ಕಮಗಳೂರು, ಸೆ.12: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರಕಾರದ ವತಿಯಿಂದ 5 ಲಕ್ಷ ರೂ. ನೀಡಲು ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಶೃಂಗೇರಿ ಶಾರದಾಂಬ ದೇವಾಲಯ ಹಾಗೂ ಗೌರಿಗದ್ದೆ ದೇವಾಲಯಕ್ಕೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಶೃಂಗೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಭೇಟಿಯಲ್ಲಿ ವಿಶೇಷತೆ ಏನಿಲ್ಲ. ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಹಿಂದೆ ಮಳೆಯಾಗಲಿ ಎಂದು ದೇವರನ್ನು ಪೂಜಿಸುತ್ತಿದ್ದೆವು, ಆದರೆ ಈಗ ಮಳೆ ಸಾಕಪ್ಪ ಎಂದು ದೇವರನ್ನು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಒಳಿತಿನ ಹಿನ್ನೆಲೆಯಲ್ಲಿ ಶೃಂಗೇರಿ ದೇವಿಗೆ ಪೂಜೆ ಸಲ್ಲಿಸಲು ಭೇಟಿ ನೀಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಈ ಬಾರಿ ತೀವ್ರ ಅತಿವೃಷ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಮನೆಕಳೆದುಕೊಂಡವರಿಗೆ ಈ ಹಿಂದೆ ನೀಡುತ್ತಿದ್ದ ಪರಿಹಾರಧನ ಯಾವುದಕ್ಕೂ ಸಾಲುತ್ತಿರಲಿಲ್ಲ. ಈ ಬಗ್ಗೆ ಚಿಂತನೆ ನಡೆಸಿದ ರಾಜ್ಯ ಸರಕಾರ ಮಳೆಯಿಂದಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರಧನ ನೀಡಲು ಗುರುವಾರವೇ ಆದೇಶಿಸಲಾಗಿದೆ. 5 ಲಕ್ಷ ರೂ. ಪೈಕಿ ಮನೆ ನಿರ್ಮಾಣದ ಫೌಂಡೇಶನ್ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ 1 ಲಕ್ಷ ರೂ. ಕೂಡಲೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಮಳೆಯಿಂದಾಗಿ ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಳೂ ನಾಶವಾಗಿದ್ದು, ಈ ಸಂಬಂಧ ಕಂದಾಯಾಧಿಕಾರಿಗಳು ಸರ್ವೆ ಮಾಡುತ್ತಿದ್ದಾರೆ. ವರದಿ ಬಂದ ನಂತರ ಯಾವ ಪ್ರಮಾಣಲ್ಲಿ ಪರಿಹಾರ ನೀಡಬೇಕೆಂಬನ್ನು ತೀರ್ಮಾನಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಕೇಂದ್ರ ಸರಕಾರ ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಗೆ ಇದುವರೆಗೂ ನಯಾ ಪೈಸೆ ಪರಿಹಾರ ಧನ ಬಿಡುಗಡೆ ಮಾಡಿಲ್ಲವಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಿಎಂ, ಕೇಂದ್ರ ಸರಕಾರಕ್ಕೆ ಅತಿವೃಷ್ಟಿಯಿಂದಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ತಂಡವೊಂದು ರಾಜ್ಯದಲ್ಲಿ ಅತಿವೃಷ್ಟಿ ಹಾನಿಯ ಸಮೀಕ್ಷೆ ನಡೆಸಿದೆ. ತಂಡ ಸಮೀಕ್ಷಾ ವರದಿ ನೀಡಿದ್ದು, ಇನ್ನೊಂದು ವಾರದಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಅತಿವೃಷ್ಟಿ ಪರಿಹಾರಕ್ಕೆ ಅನುದಾನ ನೀಡಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಿ ಒಕ್ಕಲಿಗ ಸಮುದಾಯದಿಂದ ಭಾರೀ ಸಮುದಾಯ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲದಂತಾಗಿದೆ. ಅಸ್ತಿತ್ವಕ್ಕಾಗಿ ಏನಾದರೂ ಮಾಡುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಇದೇ ವೇಳೆ ವ್ಯಂಗ್ಯವಾಡಿದರು.

ಈ ವೇಳೆ ಸಚಿವ ಸಿಟಿ ರವಿ, ಮಾಜಿ ಶಾಸಕ ಜೀವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಡಿಸಿ ಡಾ.ಕುಮಾರ್ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ಮುಖಂಡರು ಉಪಸ್ಥಿತರಿದ್ದರು.

ರಾಜ್ಯ ಸರಕಾರ ಅತಿವೃಷ್ಟಿ ಸಂತ್ರಸ್ಥರಿಗೆ ನೀಡುವ ನಿಟ್ಟಿನಲ್ಲಿ ಕಾಳಜಿ ವಹಿಸಿದ್ದು, ಈಗಾಗಲೇ ಸಂತ್ರಸ್ತರಿಗೆ 10 ಸಾವಿರ ರೂ.ಪರಿಹಾರಧನ ನೀಡಲಾಗಿದೆ. ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾದರೂ ಪರವಾಗಿಲ್ಲ ಎಂದು ಭಾವಿಸಿ ಸರಕಾರ ಮನೆಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಕೊಳ್ಳಲು 1 ಲಕ್ಷ ಇದ್ದ ಪರಿಹಾರವನ್ನು 5 ಲಕ್ಷ ರೂಗೆ ಏರಿಸಿದೆ. ಹಿಂದಿನ ಸರಕಾರ ಸಾಲ ಮನ್ನಾ ಮಾಡಿರುವುದನ್ನು ನಮ್ಮ ಸರಕಾರ ಯಾವುದೇ ತಡೆಯೊಡ್ಡಿಲ್ಲ. ಆದರೂ ಕಾಂಗ್ರೆಸ್ ಪಕ್ಷದ ಸ್ನೇಹಿತರು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಅದಕ್ಕೆ ಅರ್ಥವಿಲ್ಲ.
- ಯಡಿಯೂರಪ್ಪ, ಸಿಎಂ

ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿ ಪಟ್ಟಣದ ಮೆಣಸೆ ಹೆಲಿಪ್ಯಾಡ್‍ಗೆ ಆಗಮಿಸಿದ ಸಿಎಂ ಅವರನ್ನು ಜಿಲ್ಲಾಧಿಕರಿ ಡಾ.ಬಗಾದಿ ಗೌತಮ್ ಸ್ವಾಗತಿಸಿದರು. ನಂತರ ಶೃಂಗೇರಿ ದೇವಾಲಯಕ್ಕೆ ತೆರಳಿದ ಸಿಎಂ ಕೆಲ ಹೊತ್ತು ಪೂಜೆ ಸಲ್ಲಿಸಿದರು. ಆ ಬಳಿಕ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ಅವರು ಗುರುಗಳ ಆಶೀರ್ವಾದ ಪಡೆದು ಕೆಲಹೊತ್ತು ಚರ್ಚೆ ನಡೆಸಿದರು. ಶೃಂಗೇರಿ ಭೇಟಿ ನಂತರ ವಾಹನದ ಮೂಲಕ ಕೊಪ್ಪ ತಾಲೂಕಿನ ಗೌರಿಗದ್ದೆಗೆ ಭೇಟಿ ನೀಡಿದ ಯಡಿಯೂರಪ್ಪ, ವಿವಿಧ ಪೂಜೆ, ಯಾಗಗಳಲ್ಲಿ ಪಾಲ್ಗೊಂಡರು. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂದಿರುಗಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News