ಜೆಡಿಎಸ್ ಶಾಸಕರು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಶಾಸಕ ಕೆ.ಸುರೇಶ್‍ ಗೌಡ

Update: 2019-09-12 17:06 GMT

ಮಂಡ್ಯ, ಸೆ.12: ತಾನು, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್‍ನ ಯಾವುದೇ ಶಾಸಕರು ಬಿಜೆಪಿ  ಸೇರುವ ಪ್ರಶ್ನೆಯೇ ಇಲ್ಲ ಎಂದು ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್‍ಗೌಡ ಹೇಳಿದ್ದಾರೆ.

ಬೆಕ್ಕಳಲೆ ಗ್ರಾಮದಲ್ಲಿ ಗುರುವಾರ ಅಂಗನವಾಡಿ ಕೇಂದ್ರ ಉದ್ಘಾಟಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಶಾಸಕರು ಮಲೇಷ್ಯಾದಲ್ಲಿ ಸಭೆ ಸೇರಿದ್ದರು, ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನ ಮಾಡಿದ್ದಾರೆ ಎಂಬುದೆಲ್ಲ ಊಹಾಪೋಹ ಎಂದರು.

ರಾಜ್ಯದಲ್ಲಿ ಸ್ಥಿರ ಸರಕಾರ ಇರಬೇಕು ಎಂಬುದು ನಮ್ಮ ಆಶಯ. ಏಕೆಂದರೆ, ಇದರಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಯಾರು ಕೂಡ ಚುನಾವಣೆ ಎದುರಿಸಲು ಸಿದ್ದವಿಲ್ಲ ಎಂದು ಅವರು ಹೇಳಿದರು.

ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡುವವರಿಗೆ ಸಹಕಾರ ನೀಡಬೇಕು ಎಂಬುದು ನಮ್ಮ ಚಿಂತನೆಯಾಗಿದೆ. ಅಂತಿಮವಾಗಿ ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪು ಮಾಡಿದ್ದರೆ ಶೀಕ್ಷೆ ನೀಡಲಿ. ಆದರೆ, ಈ.ಡಿ ಅಧಿಕಾರಿಗಳು ಬಂಧಿಸಿರುವುದು ಹಾಗೂ ವಿಚಾರಣೆ ಮಾಡುತ್ತಿರುವ ಸಂದರ್ಭ ಸರಿಯಿಲ್ಲ. ಉಪ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಮಾಡುತ್ತಿರುವುದು ನೋಡಿದರೆ ಕೇಂದ್ರ ಸರಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News