ಸ್ಮಾರ್ಟ್‍ಸಿಟಿ ಯೋಜನೆ ವಿಳಂಬಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ: ಸಂಸದ ಜಿ.ಎಂ.ಸಿದ್ದೇಶ್ವರ

Update: 2019-09-12 17:31 GMT

ದಾವಣಗೆರೆ, ಸೆ.12: ಅಧಿಕಾರಿಗಳ ಬೇಜಾವಾಬ್ದಾರಿತನದಿಂದಾಗಿ ಸ್ಮಾರ್ಟ್‍ಸಿಟಿ ಯೋಜನೆ ವಿಳಂಬವಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು. 

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರಾಭಿವೃದ್ಧಿ ಯೋಜನೆಗಳ ಕುರಿತು ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಮಾರ್ಟ್‍ಸಿಟಿ ಯೋಜನೆಯನ್ನು ಘೋಷಿಸಿ ಐದು ವರ್ಷಗಳು ಕಳೆದಿವೆ. ಮೊದಲ ಹಂತದಲ್ಲಿಯೇ ದಾವಣಗೆರೆ ನಗರ ಯೋಜನೆಗೆ ಒಳಪಟ್ಟಿತ್ತು. ನಂತರ ಸಾಕಷ್ಟು ಅನುದಾನ ಕೂಡ ಬಂದಿದೆ. ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಅದಕ್ಕಾಗಿಯೇ ಅಧಿಕಾರಿಗಳಿದ್ದಾರೆ. ಎಂಡಿ ಇದ್ದಾರೆ, ಸಮಿತಿ ಇದೆ, ಮೇಲಾಗಿ ಹಣ ಇದೆ, ಸರ್ಕಾರ ಇದೆ. ಇದೆಲ್ಲದರ ನಡುವೆಯೂ ಕೇಂದ್ರದಿಂದ ಬಿಡುಗಡೆಯಾಗಿರುವ 396 ಕೋಟಿ ರೂ. ಗಳಲ್ಲಿ ಕೇವಲ 114 ಕೋಟಿ ರೂ. ವೆಚ್ಚ ಮಾಡಿದ್ದೀರಿ. ಉಳಿದ ಹಣವನ್ನು ಏನು ಮಾಡುತ್ತೀರಿ ? ನಿಮಗೆ ಜವಾಬ್ದಾರಿ ಇದ್ದರೆ ಹೀಗೆ ಮಾಡುತ್ತಿರಲಿಲ್ಲ. ಕೇವಲ ಸಬೂಬು ಹೇಳುತ್ತಲೇ ಕಾಲ ಕಳೆಯುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡರು. 

ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶರೀಫ್ ಯೋಜನೆಯಡಿ ಅಭಿವೃದ್ಧಿ ಕುಂಠಿತಗೊಂಡಿರುವ ಕುರಿತು ನೀಡಿದ ಸ್ಪಷ್ಟನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಕೆಲವು ನಿರ್ಧಾರಗಳನ್ನು ನೀವೆ ಕೈಗೊಳ್ಳುತ್ತೀರಿ. ನಾನು ಮತ್ತು ಸಂಬಂಧಿಸಿದ ಶಾಸಕರ ಗಮನಕ್ಕೆ ತರುವುದೇ ಇಲ್ಲ. ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ನಾವು ಕೂಡ ಅವುಗಳ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು. 

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ನಗರದಲ್ಲಿ ಬೀದಿ ದೀಪಗಳೇ ಇಲ್ಲದಂತಾಗಿದೆ. ಈ ಊರಲ್ಲಿ ಬೆಳಕು ಹಾಕುವವರೇ ಇಲ್ಲವಾಗಿದೆ. ಈ ಬಗ್ಗೆ ಸಾಕಷ್ಟು ಜನರಿಂದ ದೂರುಗಳು ಬಂದಿವೆ. ಲೈಟುಗಳನ್ನು ಹಾಕಿದರೂ ಅವುಗಳು ಗಾಳಿಗೆ ಅಲುಗಾಡಿ ಮತ್ತೆ ಹಾಳಾಗುತ್ತಿವೆ ಎಂದು ದೂರಿದರು. 

ಪಾಲಿಕೆ ಮೇಯರ್ ಮಂಜುನಾಥ್ ಬಳ್ಳಾರಿ ಮಾತನಾಡಿ, ನಗರದಲ್ಲಿ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಮುಂದಿನ ತಿಂಗಳು ಟೆಂಡರ್ ಅಂತಿಮಗೊಳ್ಳಲಿದ್ದು, ಶೀಘ್ರವೇ ಬೀದಿ ದೀಪ ಅಳವಡಿಸಲಾಗುವುದು ಎಂದರು.   

ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಮಂಡಕ್ಕಿ ಭಟ್ಟಿಗಳ ಸ್ಥಳಾಂತರಕ್ಕೆ ಈಗಾಗಲೇ ಅರಸಾಪುರ ಮತ್ತು ಕರಿಲಕ್ಕೇನಹಳ್ಳಿ ಬಳಿ ಜಮೀನು ಗುರುತಿಸುವ ಕೆಲಸ ನಡೆಯುತ್ತಿದೆ. ಮೊದಲು ಮಂಡಕ್ಕಿ ಭಟ್ಟಿ ಮಾಲಕರು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಮನವೊಲಿಸಿದ ಮೇಲೆ ಕೆಲವರು ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದು ಒಪ್ಪಿಗೆ ನೀಡಿದ್ದಾರೆ. ಭಟ್ಟಿಗಳ ಸ್ಥಳಾಂತರ ನಡೆಯುವುದು ಖಚಿತ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್ ಮೊದಲು ಮಂಡಕ್ಕಿ ಭಟ್ಟಿಗಳ ಸ್ಥಳಾಂತರವಾಗಬೇಕು. ಅವುಗಳಿಂದ ವಾಯು ಮಾಲಿನ್ಯ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದ್ದು, ಹೊಸದಾಗಿ ಭೂಮಿ ಖರೀದಿಸಿ ಮೊದಲು ಭಟ್ಟಿಗಳ ಸ್ಥಳಾಂತರಕ್ಕೆ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು.  

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾಬಸವಂತಪ್ಪ, ದೂಡಾ ಆಯುಕ್ತ ಆದಪ್ಪ ಸೇರಿದಂತೆ ವಿವಿಧ  ಇಲಾಖೆಗಳ ಅಧಿಕಾರಿಗಳ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News