ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಹೆಚ್ಚು ಅನುದಾನ ನೀಡಲು ಸರಕಾರ ಬದ್ಧ: ಸಚಿವ ಸಿ.ಟಿ.ರವಿ

Update: 2019-09-12 17:45 GMT

ಚಿಕ್ಕಮಗಳೂರು, ಸೆ.12: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅನುದಾನ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಚಿಕ್ಕಮಗಳೂರು ವಿಧಾನ ಸಭಾಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಜಿಲ್ಲೆಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಠಿ ಬಗ್ಗೆ ಚರ್ಚಿಸಿದ ವಿಷಯವನ್ನು ಸಭೆಯ ಗಮನಕ್ಕೆ ತಂದರು. 2017-18ನೇ ಸಾಲಿನ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ಮೆಡಿಕಲ್‍ ಕಾಲೇಜು ನಿರ್ಮಾಣಕ್ಕೆ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಆದ್ಯತೆ ನೀಡಿದ್ದು, ಸುಮಾರು 680 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್‍ ಕಾಲೇಜು ನಿರ್ಮಾಣ ಮಾಡಲಾಗುವುದು. ಜಿಲ್ಲಾ ಕ್ರೀಡಾಂಗಣ ಮತ್ತು ಒಳ ಕ್ರೀಡಾಂಗಣದ ನಿರ್ಮಾಣಕ್ಕೆ ಡಿ.ಪಿ.ಆರ್ ನೀಡಲಾಗಿದೆ. ಬಸವನಹಳ್ಳಿ ಕೆರೆ, ಕೋಟೆಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಹಣದ ಬೇಡಿಕೆಗೆ ಸ್ಪಂದಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಇ.ಎಸ್.ಐ ಆಸ್ಪತ್ರೆ ನಿರ್ಮಾಣಕ್ಕೆ ಸುಮಾರು 30 ಸಾವಿರ ಕಾರ್ಮಿಕರ ಹೆಸರನ್ನು ನೊಂದಾಯಿಸಬೇಕಾಗಿದ್ದು, ಹಾಗಾದರೆ ಮಾತ್ರ ಇ.ಎಸ್.ಐ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಇದೆ ಎಂದ ಅವರು, ಈ ಸಂಬಂಧ ಡಿ.ಪಿ.ಆರ್ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸಮೀಪದಲ್ಲಿ ಕಿರು ವಿಮಾನ ನಿಲ್ದಾಣಕ್ಕೆ ಅಂಬಳೆಯಲ್ಲಿ ಜಾಗ ಗುರುತಿಸಲಾಗಿದ್ದು, ಇನ್ನೂ 30 ಎಕರೆ ಜಾಗದ ಅವಶ್ಯಕತೆ ಇದೆ. ಆದ್ದರಿಂದ ಖಾಸಗಿ ಜಮೀನನ್ನು ಕೊಂಡುಕೊಳ್ಳಲು ಚಿಂತಿಸಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಈಗಾಗಲೇ 7 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಒಳಗೊಂಡಂತೆ ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಡಿ.ಪಿ.ಆರ್ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟಕೇಂದ್ರ ನಿರ್ಮಾಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿಜಯಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಜಗೋಪಾಲ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವಿವಿದ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News