ಮಡಿಕೇರಿ ದಸರಾ ಜನೋತ್ಸವಕ್ಕೆ 1 ಕೋಟಿ ರೂ.: ಸಿಎಂ ಭರವಸೆ
Update: 2019-09-12 23:19 IST
ಮಡಿಕೇರಿ, ಸೆ.12: ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಜನೋತ್ಸವ ಆಚರಣೆಗೆ 1 ಕೋಟಿ ರೂ. ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಡಿಕೇರಿ ದಸರಾ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ನಗರ ದಸರಾ ಸಮಿತಿ ನಿಯೋಗವು ದಸರಾ ಉತ್ಸವಾಚರಣೆಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು 1 ಕೋಟಿ ರೂ. ಅನುದಾನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.
ದಸರಾ ಸಮಿತಿ ನಿಯೋಗದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಹ್ಮಣಿ, ದಸರಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಉಪಾಧ್ಯಕ್ಷ ನೆರವಂಡ ಜೀವನ್, ಖಜಾಂಜಿ ಉಮೇಶ್ ಸುಬ್ರಹ್ಮಣಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ ಮತ್ತಿತರರು ಹಾಜರಿದ್ದರು.