ಪಶ್ಚಿಮಘಟ್ಟ ಪ್ರವಾಸಿ ಯೋಜನೆ ರೂಪಿಸಲು ಚಿಂತನೆ: ಸಚಿವ ಸಿ.ಟಿ.ರವಿ

Update: 2019-09-12 18:13 GMT

ಮಡಿಕೇರಿ, ಸೆ.12: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಮತ್ತು ಬೆಳಗಾವಿ ಒಳಗೊಂಡಂತೆ ಮಲೆನಾಡು ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮಘಟ್ಟ ಪ್ರವಾಸಿ ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಅವರು ಮಾತನಾಡಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿ ಪ್ರವಾಸಿ ಯೋಜನೆ ರೂಪಿಸಲಾಗುವುದು. ಪರಿಸರ ಸ್ನೇಹಿ ಮತ್ತು ವೈಜ್ಞಾನಿಕ ಪ್ರವಾಸೋದ್ಯಮವನ್ನು ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.    

ಕೊಡಗಿನಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾಗಿದ್ದು, ಸುಸ್ಥಿರ ಪ್ರವಾಸೋದ್ಯಮಕ್ಕೂ ಕೊಡಗು ಹೆಸರಾಗಬೇಕೆಂದು  ಅಭಿಪ್ರಾಯಪಟ್ಟ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಯೋಜನೆ ಮತ್ತು ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.

ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳು ಹಾಗೂ ಮಾಹಿತಿ ಕೇಂದ್ರ ತೆರೆದು, ಅಗತ್ಯ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ನಿರ್ವಹಣೆ ಮಾಡುವುದು ಅತ್ಯಗತ್ಯ. ಆದ್ದರಿಂದ ಯೋಜನೆ ಮತ್ತು ನಿರ್ವಹಣೆ ಬಗ್ಗೆ ಸ್ಥಳೀಯರ ಜೊತೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಅವರು ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಪ್ರವಾಸಿ ತಾಣಗಳ ಪಟ್ಟಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು ಕೊಡವ ಹೆರಿಟೇಜ್ ಕಟ್ಟಡ ನಿರ್ಮಾಣ, ಕನ್ನಡ ಸಾಂಸ್ಕೃತಿಕ ಸಮುಚ್ಛಯ ಭವನ ಮತ್ತಿತರ ವಿವಿಧ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ಪ್ರವಾಸಿ ಟ್ಯಾಕ್ಸಿಗಳನ್ನು ಅರ್ಹರಿಗೆ ವಿತರಿಸಬೇಕು. ಜೊತೆಗೆ ಬೇಡಿಕೆ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡುವಂತೆ ಸಚಿವರು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News