ಕೊಡಗಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ಬದ್ಧ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

Update: 2019-09-12 18:23 GMT

ಮಡಿಕೇರಿ, ಸೆ.12 : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಯೋಜನೆ ಮತ್ತು ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೊಡಗಿನ ಪ್ರವಾಸಿತಾಣಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ತಿಳಿಸಿದರು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.

ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳು ಹಾಗೂ ಮಾಹಿತಿ ಕೇಂದ್ರ ತೆರೆದು, ಅಗತ್ಯ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ನಿರ್ವಹಣೆ ಮಾಡುವುದು ಅತ್ಯಗತ್ಯ. ಆದ್ದರಿಂದ ಯೋಜನೆ ಮತ್ತು ನಿರ್ವಹಣೆ ಬಗ್ಗೆ ಸ್ಥಳೀಯರ ಜೊತೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.

ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದ ಸಚಿವರು, ಜಿಲ್ಲೆಯಲ್ಲಿನ 296 ದಾಖಲೆ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು, ಈ ಗ್ರಾಮಗಳ ಇತಿಹಾಸದ ದಾಖಲೀಕರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆ ದಿಸೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಸಲಹೆ ಮಾಡಿದರು. 

ಗ್ರಾಮದ ಇತಿಹಾಸ, ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ವ್ಯವಸ್ಥೆ, ಕಾಲಘಟ್ಟ ಮಾಹಿತಿ ಹೀಗೆ ಸಮಗ್ರ ಗ್ರಾಮ ಅಧ್ಯಯನ ಮಾಡಿ ವರದಿ ನೀಡುವಂತೆ ಸಚಿವರು ಸೂಚಿಸಿದರು. ಆ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸುವಂತೆ ಸಚಿವರು ಸಲಹೆ ಮಾಡಿದರು. ದಸರಾ ತಯಾರಿ ಬಗ್ಗೆ ಮಾಹಿತಿ ಪಡೆದ ಸಚಿವರು ದಸರಾವನ್ನು ವ್ಯವಸ್ಥಿತವಾಗಿ ಆಯೋಜಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.  

ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಪ್ರವಾಸಿ ತಾಣಗಳ ಪಟ್ಟಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು ಕೊಡವ ಹೆರಿಟೇಜ್ ಕಟ್ಟಡ ನಿರ್ಮಾಣ, ಕನ್ನಡ ಸಾಂಸ್ಕೃತಿಕ ಸಮುಚ್ಚಯ ಭವನ ಮತ್ತಿತರ ವಿವಿಧ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಪ್ರವಾಸಿ ಟ್ಯಾಕ್ಸಿಗಳನ್ನು ಅರ್ಹರಿಗೆ ವಿತರಿಸಬೇಕು. ಜೊತೆಗೆ ಬೇಡಿಕೆ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡುವಂತೆ ಸಚಿವರು ನಿರ್ದೇಶನ ನೀಡಿದರು. 

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಮತ್ತು ಬೆಳಗಾವಿ ಒಳಗೊಂಡಂತೆ ಮಲೆನಾಡು ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮಘಟ್ಟ ಪ್ರವಾಸಿ ಯೋಜನೆ ರೂಪಿಸಲು ಚಿಂತಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿ ಪ್ರವಾಸಿ ಯೋಜನೆ ರೂಪಿಸಲಾಗುವುದು. ಪರಿಸರ ಸ್ನೇಹಿ ಮತ್ತು ವೈಜ್ಞಾನಿಕ ಪ್ರವಾಸೋದ್ಯಮವನ್ನು ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಅನುಷ್ಠಾನ ತರಲಾಗುವುದು ಎಂದರು.     

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಗಳ ದಾಖಲೀಕರಣ ಸಂಬಂಧಿಸಿದಂತೆ ರಜೆ ಅವಧಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಮಗ್ರ ಮಾಹಿತಿ ಸಂಗ್ರಹಿಸುವಂತಾಗಬೇಕು. ನಗರದ ಕೋಟೆ ಕಟ್ಟಡ ಬೀಳುವ ಹಂತದಲ್ಲಿದೆ. ಇದನ್ನು ಸರಿಪಡಿಸುವಂತಾಗಬೇಕು ಎಂದು ಸಚಿವರ ಗಮನಕ್ಕೆ ತಂದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ಅವರು ಜಿಲ್ಲೆಯಲ್ಲಿ ಅಬ್ಬಿ ಜಲಪಾತ, ತಲಕಾವೇರಿ, ನಾಲ್ಕು ನಾಡು ಅರಮನೆ, ಭಾಗಮಂಡಲ, ಓಂಕಾರೇಶ್ವರ ದೇವಸ್ಥಾನ, ಕಕ್ಕಬ್ಬೆ ಇಗ್ಗುತಪ್ಪ ದೇವಸ್ಥಾನ, ಕಾವೇರಿ ನಿಸರ್ಗಧಾಮ, ಹಾರಂಗಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಇರ್ಪು ಜಲಪಾತ ಮತ್ತಿತರವನ್ನು ಪ್ರವಾಸಿ ತಾಣಗಳೆಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ರಾಜಾಸೀಟ್ ಸಮಗ್ರ ಅಭಿವೃದ್ಧಿ, ಕೆಂಪುರಾಶಿ ಮೊಟ್ಟೆಯಿಂದ ಮಂಟೆಕಲ್ಲು ಶಾಲೆ ವರೆಗೆ ರಸ್ತೆ ಅಭಿವೃದ್ಧಿ, ದುಬಾರೆ ಬಳಿ ಕಾವೇರಿ ನದಿ ತೀರದ ಬಳಿ ಪಾರ್ಕಿಂಗ್ ಅಭಿವೃದ್ಧಿ, ನಾಲ್ಕುನಾಡು ಅರಮನೆ ಸಂಪರ್ಕ ರಸ್ತೆ ಅಭಿವೃದ್ಧಿ, ದುಬಾರೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಾಣ, ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ, ಮಲ್ಲಳ್ಳಿ ಜಲಪಾತ ಬಳಿ ಮೆಟ್ಟಿಲುಗಳ ನಿರ್ಮಾಣ, ಕುಶಾಲನಗರದ ತಾವರೆಕೆರೆ ಹತ್ತಿರ ಪ್ರವಾಸಿ ಮೂಲ ಸೌಕರ್ಯ ಅಭಿವೃದ್ಧಿ, ಓಂಕಾರೇಶ್ವರ ದೇವಸ್ಥಾನದ ಬಳಿ ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ, ಇರ್ಪು ಜಲಪಾತದಲ್ಲಿ ಪ್ರವಾಸಿ ಸೌಲಭ್ಯ ಮತ್ತು ಉದ್ಯಾನವನ ನಿರ್ಮಾಣ, ರಾಜಾಸೀಟುಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್, ಪಾಥ್‍ವೇ, ರೈಲಿಂಗ್ಸ್ ನಿರ್ಮಾಣ, ಮಾಂದಲ್ ಪಟ್ಟಿಗೆ ರೈಲಿಂಗ್ಸ್, ಮೆಟ್ಟಿಲುಗಳ ನಿರ್ಮಾಣ, ಪಾರ್ಕಿಂಗ್ ಸೌಲಭ್ಯ, ಶೌಚಾಲಯ, ಕುಡಿಯುವ ನೀರು ಸೌಲಭ್ಯ, ಅಬ್ಬಿ ಜಲಪಾತಕ್ಕೆ ಸಿಸಿ ರಸ್ತೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಸುವರ್ಣ ಕನ್ನಡ ಸಮುಚ್ಚಯ ಭವನ, ಕುಶಾಲನಗರ ಕನ್ನಡ ಕಲಾಭವನ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆ.ಟಿ.ದರ್ಶನ್ ಮಾಹಿತಿ ನೀಡಿದರು.     

ಸಭೆಯ ಆರಂಭದಲ್ಲಿ ದಸರಾ ಸಿದ್ಧತೆ ಸಂಬಂಧಿಸಿದಂತೆ ಪೌರಾಯುಕ್ತರಾದ ರಮೇಶ್ ಅವರು ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಕೆಆರ್‍ಐಡಿಎಲ್ ಸಂಸ್ಥೆಯ ಎಇಇ ರಮೇಶ್ ಹಲವು ಮಾಹಿತಿ ನೀಡಿದರು.

ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿ ರೇಖಾ ಅವರು ನಾಲ್ಕುನಾಡು ಅರಮನೆ, ನಗರದ ಕೋಟೆ, ರಾಜರ ಗದ್ದುಗೆ ಮತ್ತಿತರ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಇದ್ದರು.   

ಮನವಿ ಸಲ್ಲಿಕೆ: ಕಳೆದ ಎರಡು ವರ್ಷ ಪ್ರಕೃತಿ ವಿಕೋಪದಿಂದ ಕೊಡಗು ತತ್ತರಿಸಿ ಹೋಗಿದ್ದು, ಪ್ರವಾಸೋದ್ಯಮ ಅವಲಂಬಿಸಿರುವವರ ನೆರವಿಗೆ ಬರುವಂತೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಜಿ.ಚಿದ್ವಿಲಾಸ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News