ಕಾಶ್ಮೀರದ ಸಂಪರ್ಕ ನಿರ್ಬಂಧ ತೆರವುಗೊಳಿಸಲು ಭಾರತವನ್ನು ಒತ್ತಾಯಿಸಿ: ಅಮೆರಿಕದ ಸಂಸದರಿಂದ ಟ್ರಂಪ್‌ಗೆ ಕರೆ

Update: 2019-09-13 15:00 GMT

ವಾಶಿಂಗ್ಟನ್, ಸೆ. 13: ಕಾಶ್ಮೀರದಲ್ಲಿನ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಪ್ರಭಾವಿ ಸಂಸದರ ಗುಂಪೊಂದು, ಆ ರಾಜ್ಯದಲ್ಲಿ ಹೇರಲಾಗಿರುವ ಸಂಪರ್ಕ ನಿರ್ಬಂಧವನ್ನು ತೆರವುಗೊಳಿಸಲು ಹಾಗೂ ಬಂಧನಕ್ಕೆ ಒಳಗಾಗಿರುವ ಜನರನ್ನು ಬಿಡುಗಡೆ ಮಾಡಲು ಭಾರತದ ಮೇಲೆ ಒತ್ತಡ ಹೇರುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ, ಸಂಪರ್ಕ ನಿರ್ಬಂಧವನ್ನು ವಿಧಿಸಲಾಗಿದೆ ಹಾಗೂ ನೂರಾರು ಮಂದಿಯನ್ನು ಬಂಧನದಲ್ಲಿಡಲಾಗಿದೆ.

ಪ್ರತಿಯೊಂದು ದಿನ ಕಳೆದಂತೆ ಕಾಶ್ಮೀರದ ಜನರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಸೆನೆಟರ್‌ಗಳಾದ ಕ್ರಿಸ್ ವಾನ್ ಹೊಲನ್, ಟಾಡ್ ಯಂಗ್, ಬೆನ್ ಕಾರ್ಡಿನ್ ಮತ್ತು ಲಿಂಡ್ಸೆ ಗ್ರಹಾಂ ಅವರು ಟ್ರಂಪ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘‘ಹಾಗಾಗಿ, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ, ಕಾಶ್ಮೀರದಲ್ಲಿ ವಿಧಿಸಲಾಗಿರುವ ದೂರಸಂಪರ್ಕ ಮತ್ತು ಇಂಟರ್‌ನೆಟ್ ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ, ಸಂಚಾರ ನಿರ್ಬಂಧ ಮತ್ತು ಕರ್ಫ್ಯೂವನ್ನು ತೆರವುಗೊಳಿಸುವಂತೆ ಹಾಗೂ ಬಂಧಿಸಲ್ಪಟ್ಟಿರುವ ಕಾಶ್ಮೀರಿಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕರೆ ನೀಡುವಂತೆ ನಾವು ನಿಮಗೆ ಕರೆ ನೀಡುತ್ತೇವೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪತ್ರದ ಪ್ರತಿಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಸ್ಥಾನಮಾನ ಬದಲಾವಣೆಯಿಂದ ಕಾಶ್ಮೀರದ ಜನರಿಗೆ ಹೆಚ್ಚು ಅಪಾಯ

ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನದಲ್ಲಿ ಮಾಡಲಾಗಿರುವ ಅಗಾಧ ಬದಲಾವಣೆಗಳು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷದಲ್ಲಿನ ಹೆಚ್ಚಳಕ್ಕೆ ಅವಕಾಶ ನೀಡುತ್ತದೆ ಹಾಗೂ ಅದು ಜಮ್ಮು ಮತ್ತು ಕಾಶ್ಮೀರದ ಜನರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಅಮೆರಿಕದ ಇನ್ನೋರ್ವ ಸೆನೆಟರ್ ಬಾಬ್ ಕ್ಯಾಸಿ ಹೇಳಿದ್ದಾರೆ.

‘‘ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಸ್ವನಿರ್ಣಯದ ಹಕ್ಕು ಇರಬೇಕೆಂದು ನಾನು ಪ್ರತಿಪಾದಿಸುತ್ತೇನೆ. ಆ ಪ್ರಕಾರ, ವಲಯದ ಭದ್ರತೆ ಮತ್ತು ಮಾನವಹಕ್ಕುಗಳನ್ನು ಕಡೆಗಣಿಸುವ ಕ್ರಮಗಳಿಂದ ಭಾರತ ಮತ್ತು ಪಾಕಿಸ್ತಾನಗಳೆರಡೂ ಹಿಂದೆ ಸರಿಯಬೇಕು’’ ಎಂದು ಕ್ಯಾಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News