ಯೆಮನ್: ವಿಶ್ವಸಂಸ್ಥೆ ನಿಯೋಗದ ಮುಖ್ಯಸ್ಥರಾಗಿ ಭಾರತೀಯ ಸೇನಾಧಿಕಾರಿ ನೇಮಕ

Update: 2019-09-13 13:53 GMT

ವಿಶ್ವಸಂಸ್ಥೆ, ಸೆ. 13: ಸಂಘರ್ಷಪೀಡಿತ ಯೆಮನ್ ದೇಶದ ಬಂದರು ನಗರ ಹುದೈದಾದಲ್ಲಿನ ವಿಶ್ವಸಂಸ್ಥೆಯ ವೀಕ್ಷಕ ತಂಡದ ಮುಖ್ಯಸ್ಥರಾಗಿ ಹಿರಿಯ ಭರತೀಯ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅಭಿಜಿತ್ ಗುಹಾರನ್ನು ಗುರುವಾರ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ನೇಮಿಸಿದ್ದಾರೆ.

ಮರುನಿಯೋಜನೆ ಸಮನ್ವಯ ಸಮಿತಿ (ಆರ್‌ಸಿಸಿ)ಯ ಅಧ್ಯಕ್ಷರಾಗಿ ಹಾಗೂ ಹುದೈದಾ ಒಪ್ಪಂದವನ್ನು ಬೆಂಬಲಿಸುವ ವಿಶ್ವಸಂಸ್ಥೆಯ ನಿಯೋಗ (ಯುಎನ್‌ಎಂಎಚ್‌ಎ) ಮುಖ್ಯಸ್ಥರಾಗಿ ಗುಹಾರನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಗುಟೆರಸ್ ನೇಮಿಸಿದ್ದಾರೆ ಎಂದು ಗುಟೆರಸ್‌ರ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಜನವರಿ 31ರಿಂದ ಜುಲೈ 31ರವರೆಗೆ ಆರ್‌ಸಿಸಿ ಅಧ್ಯಕ್ಷರಾಗಿ ಹಾಗೂ ಯುಎನ್‌ಎಂಎಚ್‌ಎ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಲೆಫ್ಟಿನೆಂಟ್ ಜನರಲ್ ಮೈಕಲ್ ಲೋಲಸ್‌ಗಾರ್ಡ್‌ರ ಸ್ಥಾನದಲ್ಲಿ ಗುಹಾ ಬಂದಿದ್ದಾರೆ.

  ಹುದೈದಾದಲ್ಲಿ ಯುದ್ಧವಿರಾಮ ಒಪ್ಪಂದದ ಮೇಲೆ ನಿಗಾ ಇಡುವ ವಿಶ್ವಸಂಸ್ಥೆಯ ಜವಾಬ್ದಾರಿಯ ನೇತೃತ್ವವನ್ನು ಅವರು ವಹಿಸಲಿದ್ದಾರೆ.

ಯೆಮನ್‌ನಲ್ಲಿ 2015ರಿಂದ ಸರಕಾರಿ ಪಡೆಗಳು ಮತ್ತು ಇರಾನ್ ಬೆಂಬಲಿತ ಹೌದಿ ಬಂಡುಕೋರರ ನಡುವೆ ಕಾಳಗ ನಡೆಯುತ್ತಿದೆ. ಸರಕಾರ ಮತ್ತು ಬಂಡುಕೋರರ ನಡುವೆ ಸ್ವೀಡನ್‌ನಲ್ಲಿ ಶಾಂತಿ ಮಾತುಕತೆ ನಡೆದ ಬಳಿಕ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಯುದ್ಧವಿರಾಮ ಜಾರಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News