‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ರೀ ಓಪನ್ ಮಾಡಲು ಬಿಜೆಪಿ ನಾಯಕರೇ ಸೂಚಿಸಿದ್ದಾರೆ: ಜೆಡಿಎಸ್ ಮುಖಂಡ ಶರಣಗೌಡ

Update: 2019-09-13 15:45 GMT

ಯಾದಗಿರಿ, ಸೆ. 13: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ರೀ ಓಪನ್ ಮಾಡಲು ಬಿಜೆಪಿ ಮುಖಂಡರೇ ನನಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಅಸ್ತಿತ್ವವೇ ನನ್ನ ಕೈಯಲ್ಲಿದೆ ಎಂದು ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಹಿಂದಿನ ಸರಕಾರ ನೀಡಿದ್ದ ಅನುದಾನ ಹಿಂಪಡೆದ ಕ್ರಮ ಖಂಡಿಸಿ ಪಕ್ಷದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ವಿರುದ್ಧ ಕೆಲ ಬಿಜೆಪಿ ನಾಯಕರೇ ಷಡ್ಯಂತರ ರೂಪಿಸಿದ್ದಾರೆ ಎಂದು ತಿಳಿಸಿದರು.

ಎಚ್‌ಡಿಕೆ ಅವಧಿಯಲ್ಲಿ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ಹಿಂಪಡೆಯುವ ಮೂಲಕ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದ ಅವರು, ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರದ ಹೆಚ್ಚಿನ ಅನುದಾನ ನೀಡುತ್ತಾರೆ. ಆದರೆ, ಬೇರೆಯವರ ಕ್ಷೇತ್ರಕ್ಕೆ ಅನುದಾನ ಕಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.

ಗುರುಮಿಠಕಲ್ ಕ್ಷೇತ್ರಕ್ಕೆ ಹೈ.ಕ.ಪ್ರದೇಶಾಭಿವೃದ್ಧಿ ನಿಧಿಗೆ ನೀಡಿದ್ದ 4.50 ಕೋಟಿ ರೂ. ಸೇರಿದಂತೆ ಕ್ಷೇತ್ರದ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ನೀಡಿದ್ದ ಅನುದಾನ ವಾಪಸ್ ಪಡೆಯಲಾಗಿದೆ. ನಾನು ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ ಕಾರಣಕ್ಕೆ ಅನುದಾನ ಹಿಂಪಡೆದು ದ್ವೇಷ ಸಾಧಿಸುತ್ತಿದ್ದಾರೆಂದು ಅವರು ದೂರಿದರು.

ಶರಣಾಗತಿ ಸಾಧ್ಯವಿಲ್ಲ: ಕ್ಷೇತ್ರದ ಅಭಿವೃದ್ಧಿಗೆ ನೀಡಲಾದ ಅನುದಾನ ಹಿಂಪಡೆದರೆ ನಾವು ಶರಣಾಗುತ್ತೇವೆ ಎಂದು ಬಿಎಸ್‌ವೈ ಭಾವಿಸಿದ್ದರೆ ಅದು ಅವರ ಭ್ರಮೆ. ಶರಣಾಗತಿ ನಮ್ಮ ರಕ್ತದಲ್ಲಿ ಇಲ್ಲ. ಅನುದಾನ ನೀಡದಿದ್ದರೆ ಭಿಕ್ಷೆ ಬೇಡಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಈ ಪ್ರತಿಭಟನೆ ಕೇವಲ ಟ್ರೈಲರ್. ಇದೇ ರೀತಿಯಲ್ಲಿ ದ್ವೇಷದ ರಾಜಕಾರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಿನೆಮಾ ತೋರಿಸಬೇಕಾಗುತ್ತದೆ ಎಂದು ಶರಣಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News