ಜಿ.ಟಿ.ದೇವೇಗೌಡ ಪಕ್ಷದಲ್ಲಿ ಇರುವುದಿಲ್ಲ: ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ

Update: 2019-09-13 14:48 GMT

ಧಾರವಾಡ, ಸೆ. 13: ಮಾಜಿ ಸಚಿವ ಜಿ.ಟಿ.ದೇವೇಗೌಡ ಎಲ್ಲಿಗೆ ಹೋಗುವರೋ ತಿಳಿಯದು. ಆದರೆ, ಅವರು ಜೆಡಿಎಸ್ ಪಕ್ಷದಲ್ಲಿ ಮಾತ್ರ ಇರುವುದಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ’ ಎಂಬ ಗಾದೆ ಮಾತಿನಂತೆ, ಜಿ.ಟಿ.ದೇವೇಗೌಡ ಜೆಡಿಎಸ್‌ನಲ್ಲಿ ಇರುವುದಿಲ್ಲ ಎಂಬುದು ಅವರ ಮಾತುಗಳಿಂದಲೇ ಗೊತ್ತಾಗುತ್ತದೆ ಎಂದು ಹೇಳಿದರು.

ಮೊದಲೇ ಜಿಟಿಡಿ ಅವರಿಗೆ ಅಸಮಾಧಾನವಿತ್ತು. ಆಗಲೇ ಅವರು ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದಿದ್ದರು. ಅದು ನನಗೂ ಸರಿ ಅನಿಸಿತ್ತು. ಈಗ ಪರಿಸ್ಥಿತಿ ಇನ್ನೂ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರು ಪಕ್ಷದಲ್ಲಿ ಇರುವುದಿಲ್ಲ ಎಂದು ಹೊರಟ್ಟಿ ನುಡಿದರು.

ಪಕ್ಷದ ವರಿಷ್ಠರು ಕೂಡಲೇ ಅವರನ್ನು ಕರೆದು ಮಾತನಾಡಬೇಕು. ಅದು ಬಿಟ್ಟು ಒಬೊಬ್ಬರು ಒಂದೊಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಈ ಬೆಳವಣಿಗೆಗಳನ್ನು ಗಮನಿಸಿದರೆ ಮತ್ತೆ ಆಪರೇಷನ್ ಕಮಲ ನಡೆಯುತ್ತದೆ ಎಂಬುದು ಸ್ಪಷ್ಟ ಎಂದು ತಿಳಿಸಿದರು.

ಅನುಭವಿಗಳಿಲ್ಲ: ಸಿಎಂ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಹೆಚ್ಚಾಗಿ ಅನನುಭವಿಗಳಿದ್ದು, ಅನುಭವವುಳ್ಳವರು ಅಲ್ಲಿ ಯಾರೂ ಇಲ್ಲ. ಅಲ್ಲಿ ಇದ್ದವರೆಲ್ಲರೂ ಹೊಟ್ಟೆ ತುಂಬಿದವರು ಎಂದು ಟೀಕಿಸಿದ ಹೊರಟ್ಟಿ, ಇಚ್ಚಾಶಕ್ತಿ ಕೊರತೆಯೂ ಇದೆ ಎಂದು ಲೇವಡಿ ಮಾಡಿದರು.

ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಚಿವರು ಹಾಗೂ ಸರಕಾರ ಹಗಲು-ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ, ಕೇವಲ ಪ್ರವಾಹ ನೋಡಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಸರಕಾರ ಇದೆಯೋ ಇಲ್ಲವೋ ಎಂಬ ಭಾವನೆ ಜನರಲ್ಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News