ಕಾರು-ಲಾರಿ ಮುಖಾಮುಖಿ ಢಿಕ್ಕಿ: ಆರ್​ಟಿಒ ಇನ್ಸ್ ಪೆಕ್ಟರ್ ಸ್ಥಳದಲ್ಲೇ ಮೃತ್ಯು

Update: 2019-09-13 16:17 GMT
ಅಪಘಾತದ ದೃಶ್ಯ (ಒಳ ಚಿತ್ರದಲ್ಲಿ ಮೃತ ನಸೀಮ್)

ಮೈಸೂರು,ಸೆ.13: ಕಾರು-ಲಾರಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಆರ್​ಟಿಒ ಇನ್ಸ್ ಪೆಕ್ಟರ್ ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಗುರುವಾರ ನಡೆದಿದೆ.

ಮೃತರನ್ನು ಮಳವಳ್ಳಿ ತಾಲೂಕಿನ ಶಿವನಸಮುದ್ರ ಗ್ರಾಮದ ನಿವಾಸಿ ಅಬ್ದುಲ್ ಮಜೀದ್ ಎಂಬುವರ ಪುತ್ರ ಅಬ್ದುಲ್ ನಸೀಮ್(45) ಎಂದು ಗುರುತಿಸಲಾಗಿದ್ದು, ಟಿ.ನರಸೀಪುರದ ಸೋಸಲೆ ಗ್ರಾಮದ ಬಳಿ ಬನ್ನೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಚಾಲಕ ಮೈಸೂರಿನ ಸವರದ್ ಎಂಬವರ ಪುತ್ರ ಫಾರೂಕ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಸೀಮ್ ಅವರು ಮಂಡ್ಯ ನ್ಯಾಯಾಲಯದಲ್ಲಿ ಪ್ರಕರಣವೊಂದರ ಮಾಹಿತಿ ನೀಡಿ ಹಿಂತಿರುಗುತ್ತಿದ್ದರು. ಎರಡೂ ವಾಹನಗಳ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಮೃತ ಆರ್​ಟಿಒ ಇನ್ಸ್ ಪೆಕ್ಟರ್ ಅಬ್ದುಲ್ ಮೈಸೂರಿನ ರಾಜೀವ್ ನಗರ ನಿವಾಸಿಯಾಗಿದ್ದು, ಚಾಮರಾಜನಗರ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ವಾಹನ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆ ನಂತರ ಅಧಿಕಾರಿಯ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಇತ್ತ ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News