ದಸರಾ ಆನೆಗಳಿಗೆ ಫಿರಂಗಿಯಿಂದ ಮದ್ದುಗುಂಡು ಸಿಡಿಸುವ ತಾಲೀಮು

Update: 2019-09-13 17:18 GMT

ಮೈಸೂರು,ಸೆ.13: ಮೈಸೂರು ಅರಮನೆ ಪಾರ್ಕಿಂಗ್ ಸ್ಥಳದಲ್ಲಿ  ಇಂದು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖದಲ್ಲಿ ಆನೆಗಳಿಗೆ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಫಿರಂಗಿಯಿಂದ ಮದ್ದುಗುಂಡು ಸಿಡಿಸುವ ತಾಲೀಮು ನಡೆಸಿದರು.

11 ಆನೆಗಳು ಮತ್ತು 21 ಕುದರೆಗಳು ಕೂಡ ತಾಲೀಮಿನಲ್ಲಿ ಭಾಗವಹಿಸಿದ್ದವು. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಆನೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕುದುರೆಗಳು ಭಾಗವಹಿಸಲಿವೆ.

ಪೊಲೀಸ್ ಆಧಿಕಾರಿಗಳು ಮೂರು ಸುತ್ತು  ಫಿರಂಗಿ ಸಿಡಿಸಿದರು. ಮೊದಲನೇ ಸುತ್ತಿನಲ್ಲಿ ಆನೆಗಳು ಬೆಚ್ಚಿ ಬಿದ್ದಿದ್ದವು. ಬಳಿಕ ಸೊಂಡಿಲಾಡಿಸುತ್ತ ನಿಂತಿದ್ದವು. ಆದರೆ ಮೂರು ಸುತ್ತುಗಳಲ್ಲಿಯೂ ಅಶ್ವಗಳು ಬೆಚ್ಚಿ ಬಿದ್ದಿವೆ. ಆನೆಗಳು ಮತ್ತು ಕುದುರೆಗಳು ಫಿರಂಗಿಯಿಂದ ಹೊರಬರುವ ಭಾರೀ ಸದ್ದಿಗೆ ಭಯಗೊಳ್ಳದೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದೇ ತಾಲೀಮಿನ ಉದ್ದೇಶವಾಗಿದ್ದು, ಜಂಬೂ ಸವಾರಿಯ ವೇಳೆ ವಿಚಲಿತರಾಗದೇ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಪೂರ್ವಭಾವಿಯಾಗಿ ತಾಲೀಮು ನಡೆಸಲಾಯಿತು.

ಈ ಸಂದರ್ಭ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಪೊಲೀಸ್ ನಗರ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್, ಎಸಿಪಿ ಜಿ.ಎನ್.ಮೋಹನ್, ಅರಮನೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅರಣ್ಯಾಧಿಕಾರಿ  ಮತ್ತಿತರರು ಉಪಸ್ಥಿತರಿದ್ದರು.

ಈ ಬಾರಿ ದಸರಾಗೆ ಯಾವುದೇ ಬೆದರಿಕೆ ಇಲ್ಲ: ಎಡಿಜಿಪಿ
ಮೈಸೂರು: ಈ ಬಾರಿ ಮೈಸೂರು ದಸರಾಗೆ ಯಾವುದೇ ಬೆದರಿಕೆ ಇಲ್ಲ, ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡೋಣ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದರು.

ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ 11 ಗಜಪಡೆ ಹಾಗೂ 25 ಕುದುರೆಗಳ ಫಿರಂಗಿ ತಾಲೀಮು ಕಾರ್ಯಕ್ರಮಕ್ಕೆ ಶುಕ್ರವಾರ ಅಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಾರಿ ದಸರಾ ಅತ್ಯಂತ ಸಂಭ್ರಮದಿಂದ ನಡೆಯಲಿದೆ. ಯಾವುದೇ ಬೆದರಿಕೆ ಇಲ್ಲ. ದಸರಾ ಆಚರಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಕೇವಲ ನಗರ ಪೊಲೀಸ್ ಮಾತ್ರವಲ್ಲದೆ ವಿವಿಧ ರಾಜ್ಯದಿಂದಲೂ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News