ಕುಮಾರಸ್ವಾಮಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು: ಸಚಿವ ವಿ.ಸೋಮಣ್ಣ

Update: 2019-09-13 17:32 GMT

ಮೈಸೂರು,ಸೆ.13: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 14 ತಿಂಗಳ ಅಧಿಕಾರವನ್ನು ಯಾವ ರೀತಿ ನಡೆಸಿದ್ದರು ಎಂದು ತಾಯಿ ಚಾಮುಂಡೇಶ್ವರಿ ದೇವರ ಮುಂದೆ ನಿಂತುಕೊಂಡು ಯೋಚನೆ ಮಾಡಲಿ ಎಂದು ವಸತಿ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದರು.

ನಗರದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಂಕೀರ್ಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ವಸತಿ ಸಚಿವರೋ ಅಥವಾ ದಸರಾ ಉಸ್ತುವಾರಿ ಸಚಿವರೊ ಎಂದು ವಿ.ಸೋಮಣ್ಣ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವಕರಂತೆ ಸುತ್ತಾಡಿ ಸಮಸ್ಯೆ ಅರಿತಿದ್ದಾರೆ. ನಾನು ಸಹ ಅನೇಕ ಸ್ಥಳಗಳಿಗೆ ಹೋಗಿ ಸಮಸ್ಯೆಗಳನ್ನು ಕಂಡಿದ್ದೇನೆ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ತಮ್ಮ ಕಾರ್ಯವೈಖರಿ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಜಿ.ಟಿ.ದೇವೇಗೌಡರು ಪ್ರಭಾವಿ ನಾಯಕರು, ಅವರ ಸಲಹೆಯನ್ನು ಪಡೆದುಕೊಂಡಿದ್ದೇವೆ. ಇಲ್ಲಿ ಯಾರೂ ಯಾರಿಗೂ ದೊಡ್ಡವರಲ್ಲ, ಕಲಿಯುವುದು ನಿರಂತರವಾಗಿ ಇರುತ್ತದೆ. ದಸರಾ ಬಗ್ಗೆ ಕುಮಾರಸ್ವಾಮಿ ಸಲಹೆ ಇದ್ದರೂ ಕೊಡಲಿ ಕೇಂದ್ರದ ನಾಯಕರಿಗೆ ದಸರಾಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 1996 ರಲ್ಲಿ ನಾನು 1983 ರಲ್ಲೇ ರಾಜಕಾರಣಕ್ಕೆ ಬಂದವನು. ಕುಮಾರಸ್ವಾಮಿ ಅದೃಷ್ಟದಿಂದ ಮುಖ್ಯಮಂತ್ರಿ ಆದವರು. ಅದೃಷ್ಟ ಯಾರ ಅಪ್ಪನ ಮನೆ ಸೊತ್ತು ಅಲ್ಲ, ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆದರು. ನಾನು ಮಂತ್ರಿ ಆದೆ ಅಷ್ಟೇ. ದಸರಾ ಮುಗಿದ ನಂತರ ಒಂದು ಕ್ಷಣವೂ ವ್ಯರ್ಥ ಮಾಡದೆ ವಸತಿ ಇಲಾಖೆಯ ಕೆಲಸವನ್ನು ಮಾಡುವುದಾಗಿ ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಮುಡಾ ಆವರಣದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಬಹುದು ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕುಂದುಕೊರತೆಗಳನ್ನು ಇಲ್ಲಿ ಬಂದು ಸಲ್ಲಿಸಬಹುದು. ನಾನು ಕಾರ್ಯನಿಮಿತ್ತ ಹೊರಗಡೆ ಹೋದರೂ ಇಲ್ಲಿರುವ ಸಹಾಯಕರಲ್ಲಿ ವಿಷಯ ತಿಳಿಸಿ ಹೋದಲ್ಲಿ ನಂತರ ತಾನು ಬಂದು ಪರಿಶೀಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಲ್.ನಾಗೇಂದ್ರ, ನಿರಂಜನ್‍ ಕುಮಾರ್, ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ್, ಕೋಟೆ ಶಿವಣ್ಣ, ಎಸ್.ಮಹದೇವಯ್ಯ, ರಾಜೇಂದ್ರ, ಸಿದ್ದರಾಜು, ಫಣೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News