ಶಾಲೆಗಳಲ್ಲಿ 'ಬ್ಯಾಗ್‍ ಲೆಸ್ ಡೇ' ರೂಪಿಸಲು ಚಿಂತನೆ: ಸಚಿವ ಸುರೇಶ್‍ ಕುಮಾರ್

Update: 2019-09-13 18:13 GMT

ತುಮಕೂರು, ಸೆ.13: ವಾರದಲ್ಲಿ ಒಂದು ಶಾಲೆಗಳಲ್ಲಿ ಬ್ಯಾಗ್‍ಲೆಸ್ ಡೇ ಜಾರಿಗೆ ತರುವ ಮೂಲಕ, ಮಕ್ಕಳಿಗೆ ಕ್ರಿಯಾಶೀಲ ಚಟುವಟಿಕೆಗೆಂದು ಒಂದು ದಿನ ಮೀಸಲಿಡುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಹೆಲ್ತ್ ಕಾರ್ಡ್ ವಿತರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಬ್ಯಾಗ್ ಭಾರವನ್ನು ಇಳಿಸಿ ಸಂತೋಷದಿಂದ ಶಾಲೆಗಳಿಗೆ ಹೋಗಬೇಕೆಂಬ ಉದ್ದೇಶದಿಂದ ಬ್ಯಾಗ್‍ಲೆಸ್ ಡೇ ಜಾರಿಗೆ ತರಲು ಯೋಚಿಸಲಾಗಿದೆ ಎಂದರು.

ಮಗುವಿನ ಬಾಲ್ಯವನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ, ಮಕ್ಕಳು ತರಗತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ತರಗತಿ ಹೊರಗೆ ಕಲಿಯುತ್ತಾರೆ, ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಮಕ್ಕಳು ಲವಲವಿಕೆಯಿಂದ ಕಲಿಯುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಲ್ಲದೆ ಶಿಕ್ಷಣ ಇಲಾಖೆ ಇಲ್ಲ, ಮಕ್ಕಳ ಕೇಂದ್ರಿತವಾಗಿ ಯೋಜನೆ ರೂಪಿಸಲಾಗುವುದು. ಮಕ್ಕಳ ಸ್ನೇಹಿಶಾಲೆ, ಶಿಕ್ಷಕ ಸ್ನೇಹಿ ವರ್ಗಾವಣೆ ಪದ್ಧತಿಯನ್ನು ಜಾರಿಗೆ ತರುವುದಾಗಿ ಹೇಳಿದ ಅವರು, ಒಂದು ಕೋಟಿ ಮಕ್ಕಳು, ಎರಡು ಲಕ್ಷ ಶಿಕ್ಷಕರ ಪರಿವಾರವನ್ನು ಗಮನದಲ್ಲಿ ಇರಿಸಿಕೊಂಡು ಇಲಾಖೆ ಕಾರ್ಯ ನಿರ್ವಹಿಸಲಿದೆ. ನಾನು ಶಾಸಕನಾಗಿ, ಸಚಿವನಾದರೂ ನಮ್ಮ ಏರಿಯಾದಲ್ಲಿ ನನ್ನನ್ನು ಶಿಕ್ಷಕನ ಮಗ ಎಂದು ಗುರುತಿಸುತ್ತಾರೆ ಎಂಬ ಹೆಮ್ಮೆ ಇದೆ ಎಂದರು.

ಸಿದ್ಧಗಂಗಾ ಆಸ್ಪತ್ರೆಯ ವೈದ್ಯ ಡಾ.ಪರಮೇಶ್ವರ್ ಮಾತನಾಡಿ, ಜಿಲ್ಲೆಯಲ್ಲಿ ಉನ್ನತ ಆಸ್ಪತ್ರೆಯನ್ನು ಸ್ಥಾಪಿಸಬೇಕೆಂಬ ಗೆಳೆಯರ ಕನಸಿಗೆ ಶಿವಕುಮಾರಸ್ವಾಮೀಜಿ ಒಪ್ಪಿಗೆ ಸೂಚಿಸಿದರು. ಆಸ್ಪತ್ರೆಯನ್ನು ಪ್ರಾರಂಭಿಸಬೇಕಾದರೆ ಸ್ವಾಮೀಜಿಗಳು ಬಡವರಿಗೆ ಚಿಕಿತ್ಸೆ ಒದಗಿಸುವುದಾದರೆ ಮಾತ್ರ ಒಪ್ಪಿಗೆ ಕೊಡುವುದಾಗಿ ಹೇಳಿದ್ದರು.ಅವರ ಮಾತಿನಂತೆ ಸಿದ್ಧಗಂಗಾ ಆಸ್ಪತ್ರೆ ಎಲ್ಲ ವರ್ಗದವರಿಗೂ ಚಿಕಿತ್ಸೆಯನ್ನು ಒದಗಿಸುತ್ತಿದ್ದು, ಆಸ್ಪತ್ರೆಯಲ್ಲಿರುವ ಆತ್ಯಾಧುನಿಕ ಚಿಕಿತ್ಸೆಯಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ಹೆಲ್ತ್ ಕಾರ್ಡ್ ಯೋಜನೆಗೆ ಚಾಲನೆ ನೀಡಲಾಯಿತು. ಸಿದ್ಧಗಂಗಾ ಮಠಾಧೀಶ ಸಿದ್ಧಲಿಂಗಶ್ರೀ, ಶಾಸಕರಾದ ಜ್ಯೋತಿಗಣೇಶ್, ಸಿದ್ಧಲಿಂಗಪ್ಪ, ಡಾ.ಉಮಾಶಂಕರ್ ಸೇರಿದಂತೆ ಇತರರಿದ್ದರು.

ಸನ್ಮಾನಿತ ಶಿಕ್ಷಕರು
ಸರ್ವೋದಯ ಶಿಕ್ಷಣ ಸಂಸ್ಥೆಯ ಸೀತಾರಾಮ್, ಹೆಚ್.ಆರ್.ರೇಣುಕಯ್ಯ, ಬಿ.ಆರ್.ರಾಜಶೇಖರ್, ಬಸವರಾಜು.ಟಿ.ಆರ್, ಆರ್.ಬಿ.ಚಂದ್ರಶೇಖರ್, ತನುಜಾ, ವಿ.ಗಿರಿಜಮ್ಮ, ವಿರುಪಾಕ್ಷಯ್ಯ, ಹೆಚ್‍ಆರ್. ರವಿಕುಮಾರ್, ಸತ್ಯನಾರಾಯಣ.ಎ, ಟಿ.ಎಸ್.ರಮೇಶ್, ಶಾಂತಲಾ ಬಿ.ಎಸ್, ಗಂಗಾಧರಯ್ಯ, ಅನ್ನಪೂರ್ಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News