ರಾಜ್ಯದ 17 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ತಯಾರಿ ಆರಂಭ

Update: 2019-09-14 16:26 GMT

►ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನೆ

ಬೆಂಗಳೂರು, ಸೆ.14 : ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಟ್ಟಣ ಪಂಚಾಯತ್ ಸೇರಿದಂತೆ 11 ಜಿಲ್ಲೆಗಳ 17 ನಗರ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ.

ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಅವಧಿ ಮುಕ್ತಾಯವಾಗುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

ಇದೇ ವರ್ಷದ ಮೇನಲ್ಲಿ 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿತ್ತು. 106 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿತ್ತಾದರೂ, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿಯಿದ್ದರಿಂದ ತಡೆ ಹಿಡಿಯಲಾಗಿತ್ತು. ಅದರಲ್ಲಿ ಇತ್ಯರ್ಥಗೊಂಡವು ಸೇರಿದಂತೆ ಅವಧಿ ಮುಗಿಯುತ್ತಿರುವ 17 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ನಗರ ಸ್ಥಳೀಯ ಚುನಾವಣೆ ನಡೆಸುವ ಸಂಬಂಧ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಆಡಳಿತಕ್ಕೆ ಪತ್ರ ರವಾನೆ ಮಾಡಲಾಗಿದೆ. ಅದರಂತೆ ಮತದಾರರ ಪಟ್ಟಿ ಸಿದ್ಧಪಡಿಸುವುದು, ಮತದಾನ ಕೇಂದ್ರಗಳ ಪಟ್ಟಿಯ ಎರಡು ಪ್ರತಿಗಳನ್ನು ಆಯೋಗಕ್ಕೆ ಸಲ್ಲಿಸುವುದು, ಮತದಾನ ಕೇಂದ್ರಗಳ ಭೌತಿಕ ಪರಿಶೀಲನೆ ನಡೆಸಿ, ಆ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ.

ಚುನಾವಣೆ ನಡೆಯುವ ವಾರ್ಡ್‌ಗಳ, ಮತಗಟ್ಟೆಗಳಿಗೆ ಅನುಸಾರ ಮತದಾನ ಸಿಬ್ಬಂದಿಗಳ ನೇಮಕ ಹಾಗು ಅಗತ್ಯ ತರಬೇತಿ ನೀಡುವುದು. ಆಯೋಗದ ಸೂಚನೆಯಂತೆ ಇವಿಎಂಗಳನ್ನು ಸಂಗ್ರಹಿಸಿ, ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಾದ ಇವಿಎಂಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದು, ಚುನಾವಣಾಧಿಕಾರಿಗಳ ನೇಮಕ ಮಾಡುವಂತೆಯೂ ನಿರ್ದೇಶನ ನೀಡಲಾಗಿದೆ.

ಮಹಾನಗರ ಪಾಲಿಕೆಗೆ ಪ್ರತಿ 5 ವಾರ್ಡ್‌ಗೆ ಒಬ್ಬರು, ನಗರಸಭೆಗಳಿಗೆ ಪ್ರತಿ 6 ರಿಂದ 8 ವಾರ್ಡ್‌ಗೆ ಒಬ್ಬರು, ಪುರಸಭೆಗೆ 10 ವಾರ್ಡ್‌ಗೆ ಒಬ್ಬರು, ಪಟ್ಟಣ ಪಂಚಾಯತ್‌ನಲ್ಲಿ ಪ್ರತಿ 10 ವಾರ್ಡ್‌ಗೆ ಒಬ್ಬರಂತೆ ರಿಟರ್ನಿಂಗ್ ಅಧಿಕಾರಿ ಹಾಗೂ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ನೇಮಕ ಮಾಡುವ ಸಂಬಂಧ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆಗೆ ಅಧಿಕಾರಿಗಳ ನೇಮಕ, ಗುರುತು ಸೀಲುಗಳ ತಯಾರಿಕೆ ಹಾಗೂ ನಿರ್ವಹಣೆ, ಚುನಾವಣಾ ಸಾಮಗ್ರಿಗಳ ಸಂಗ್ರಹಣೆಯ ಬಗ್ಗೆ ತೀರ್ಮಾನ ಮಾಡುವಂತೆ ನಿರ್ದೇಶಿಸಲಾಗಿದ್ದು, ಅನುದಾನದ ಲೆಕ್ಕಾಚಾರ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ.

ಚುನಾವಣೆ ನಡೆಯುವ ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆ

ಬೆಂಗಳೂರು ಗ್ರಾಮಾಂತರ:

ಹೊಸಕೋಟೆ(ನಗರಸಭೆ)

ರಾಮನಗರ:

ಕನಕಪುರ(ನಗರಸಭೆ)

ಮಾಗಡಿ(ಪುರಸಭೆ)

ದಾವಣಗೆರೆ:

ದಾವಣಗೆರೆ(ಮಹಾನಗರ ಪಾಲಿಕೆ)

ಕೋಲಾರ:

ಕೋಲಾರ(ನಗರಸಭೆ)

ಮುಳಬಾಗಿಲು(ನಗರಸಭೆ)

ಕೆಜಿಎಫ್(ನಗರಸಭೆ)

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ(ನಗರಸಭೆ)

ಗೌರಿಬಿದನೂರು(ನಗರಸಭೆ)

ಚಿಂತಾಮಣಿ(ನಗರಸಭೆ)

ಶಿವಮೊಗ್ಗ:

ಜೋಗ ಕಾರ್ಗಲ್(ಪಟ್ಟಣ ಪಂಚಾಯತ್)

ಮೈಸೂರು:

ಹುಣಸೂರು(ನಗರಸಭೆ)

ದಕ್ಷಿಣ ಕನ್ನಡ:

ಮಂಗಳೂರು(ಮಹಾನಗರ ಪಾಲಿಕೆ)

ಧಾರವಾಡ:

ಕುಂದಗೋಳ(ಪಟ್ಟಣ ಪಂಚಾಯತ್)

ಬಳ್ಳಾರಿ:

ಕಂಪ್ಲಿ(ಪುರಸಭೆ)

ಕೂಡ್ಲಗಿ(ಪಟ್ಟಣ ಪಂಚಾಯತ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News