ಅತಿವೃಷ್ಟಿಯಿಂದ ಬೆಳೆ, ಮನೆ ನಷ್ಟ: ಬಂದೂಕಿನಿಂದ ಗುಂಡು ಹಾರಿಸಿ ರೈತ ಆತ್ಮಹತ್ಯೆ

Update: 2019-09-14 17:24 GMT

ಚಿಕ್ಕಮಗಳೂರು, ಸೆ.14: ಇತ್ತೀಚೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಮೀನಿಗೆ ಹಾನಿ ಸಂಭವಿಸಿ, ಬೆಳೆ ನಾಶಗೊಂಡ ಹಿನ್ನೆಲೆಯಲ್ಲಿ ಮನನೊಂದ ಕೃಷಿಕರೊಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಗದ್ದೆ ಎಂಬಲ್ಲಿ ಶನಿವಾರ ವರದಿಯಾಗಿದೆ. 

ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕೃಷಿಕನನ್ನು ಕಾರಗದ್ದೆ ನಿವಾಸಿ ಚೆನ್ನಪ್ಪಗೌಡ(65) ಎಂದು ಗುರುತಿಸಲಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಭೂಕುಸಿತ, ಪ್ರವಾಹದಿಂದಾಗಿ ನೂರಾರು ರೈತರ ಜಮೀನುಗಳು ನಾಶಗೊಂಡಿದ್ದವು. ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಕಾರಗದ್ದೆ ಗ್ರಾಮದಲ್ಲೀ ಅತೀವೃಷ್ಟಿಯಿಂದಾಗಿ ಭಾರೀ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು, ಚೆನ್ನಪ್ಪಗೌಡ ಅವರಿಗೆ ಸೇರಿದ್ದ ಸುಮಾರು ಆರು ಎಕರೆ ಕೃಷಿ ಜಮೀನು ಭೂಕುಸಿತದಿಂದಾಗಿ ಸಂಪೂರ್ಣ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆರು ಎಕರೆ ಪೈಕಿ 1 ಎಕರೆ ಜಮೀನಿನಲ್ಲಿ ಕಾಫಿ, ಅಡಿಕೆ, ಕಾಳು ಮೆಣಸು ಬೆಳೆದಿದ್ದರು. ಭೂ ಕುಸಿತದಿಂದ ಚೆನ್ನಪ್ಪಗೌಡ ಅವರ ಮನೆಗೂ ಗುಡ್ಡ ಕುಸಿದು ಬಿದ್ದು ಹಾನಿಯಾಗಿತ್ತು. ಈ ಘಟನೆ ನಡೆದ ಮೇಲೆ ಮಾನಸಿಕವಾಗಿ ನೊಂದಿದ್ದ ಚೆನ್ನಪ್ಪಗೌಡ ಅವರು ಖಿನ್ನತೆಗೆ ಒಳಗಾಗಿದ್ದರು. ಸರಕಾರ ಇನ್ನೂ ಪರಿಹಾರ ನೀಡಿಲ್ಲ ಎಂದು ಆಗಾಗ್ಗೆ ಕೊರಗುತ್ತಿದ್ದರು. ಈ ನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

ಘಟನೆಯ ಸುದ್ದಿ ತಿಳಿದ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಕಳಸ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಚನ್ನಪ್ಪ ಗೌಡರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. ಮಗ ದಿಲ್ಲಿಯಲ್ಲಿ ಏರ್‍ಪೋರ್ಸ್‍ನಲ್ಲಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ವಾಸ ಮಾಡುತ್ತಿದ್ದರೆಂದು ತಿಳಿದು ಬಂದಿದ್ದು, ಶನಿವಾರ ಚನ್ನಪ್ಪ ಗೌಡರ ಪತ್ನಿ ಹಾಲು ಕೊಡಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಬಂದೂಕಿನಿಂದ ಶಬ್ಧ ಕೇಳಿ ಬಂದಿದ್ದರಿಂದ ಅವರು ಮನೆಗೆ ಹಿಂದಿರುಗಿದ್ದಾರೆ. ಮನೆಯಲ್ಲಿ ಪತಿ ಇಲ್ಲದೆ ಇರುವುದನ್ನು ಗಮನಿಸಿ ತೋಟದಲ್ಲಿ ಕೆಲಸ ಮಾಡುತ್ತಿರಬಹುದೆಂದು ಅಂದುಕೊಂಡು ತೋಟದ ಕಡೆ ಹೋದಾಗ ಅಲ್ಲಿ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News