ಪತ್ನಿಗೆ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪತಿಗೆ ಐದು ವರ್ಷ ಕಾರಾಗೃಹ ಶಿಕ್ಷೆ

Update: 2019-09-14 17:45 GMT

ಮೈಸೂರು,ಸೆ.14: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪತಿಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಎಡಹಳ್ಳಿ ಗ್ರಾಮದ ನಿವಾಸಿ ಸುರೇಶ್ ಶಿಕ್ಷೆಗೆ ಗುರಿಯಾದ ವ್ಯಕ್ತಿ.

12 ವರ್ಷದ ಹಿಂದೆ ಇಲವಾಲ ಹೋಬಳಿಯ ಸಾಹುಕಾರ ಹುಂಡಿ ಗ್ರಾಮದ ವಿಜಯಲಕ್ಷ್ಮೀ ಎಂಬವರನ್ನು ಮದುವೆಯಾಗಿದ್ದ ಸುರೇಶ್, 20 ಸಾವಿರ ರೂ.ನಗದು, ಒಂದು ಚೈನು ಹಾಗೂ ಉಂಗುರವನ್ನು ವರದಕ್ಷಿಣೆಯಾಗಿ ಪಡೆದಿದ್ದ. ಮದ್ಯಸೇವನೆ ಚಟ ಬೆಳೆಸಿಕೊಂಡ ಸುರೇಶ್, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಅದೇ ರೀತಿ 5 ವರ್ಷದ ಹಿಂದೆ ರಾತ್ರಿ 7 ಗಂಟೆ ಸಮಯದಲ್ಲಿ ಕುಡಿದು ಬಂದ ಸುರೇಶ್, ಪತ್ನಿ ಮೇಲೆ ಹಲ್ಲೆ ನಡೆಸಿ, ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ವಿಜಯಲಕ್ಷ್ಮೀ ತಕ್ಷಣ ಸ್ವತಃ ತಾನೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದರು.

ಈ ಸಂಬಂಧ ವಿಜಯಲಕ್ಷ್ಮೀ ಪಾಲಕರು ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಆರಕ್ಷಕ ನಿರೀಕ್ಷಕ ಡಿ.ಅಶೋಕ್ ತನಿಖೆ ಕೈಗೊಂಡು ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಜಿ.ಕುರುವಟ್ಟಿ, ಆರೋಪಿಗೆ ಐಪಿಸಿ ಕಲಂ 498(ಎ) ಅಡಿಯಲ್ಲಿ 1 ವರ್ಷ ಕಾರಾಗೃಹ ವಾಸ ಮತ್ತು ಐಪಿಸಿ ಕಲಂ 306 ಅಡಿಯ ಅಪರಾಧಕ್ಕಾಗಿ 4 ವರ್ಷ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಅಭಿಯೋಜಕ ನಾಗಪ್ಪ ಸಿ.ನಾಕ್‍ಮನ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News