ಮೈಸೂರು: 'ಹಿಂದಿ ದಿವಸ್' ವಿರೋಧಿಸಿ ಕರವೇ ಪ್ರತಿಭಟನೆ

Update: 2019-09-14 18:02 GMT

ಮೈಸೂರು,ಸೆ.14: ಒಕ್ಕೂಟ ವ್ಯವಸ್ಥೆಯು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾತಿನಿಧ್ಯ ನೀಡುವುದನ್ನು ಬಿಟ್ಟು ಹಿಂದಿ ಭಾಷೆಗೆ ಆದ್ಯತೆಯನ್ನು ಕೊಟ್ಟು ಕೇಂದ್ರ ಸರ್ಕಾರ ಆಚರಿಸುತ್ತಿರುವ ಹಿಂದಿ ದಿವಸ್ ವಿರೋಧಿಸಿ ಕಪ್ಪು ದಿನ ಆಚರಣೆ ಮತ್ತು ಕನ್ನಡ ಭಾಷೆಗೂ ಹಿಂದಿಯಷ್ಟೇ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.

ಜಿಲ್ಲಾದಿಕಾರಿಗಳ ಕಛೇರಿ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಭಾರತದ ಸಂವಿಧಾನದ ಮೂಲಭೂತ ಆಶಯಗಳಲ್ಲಿ ಒಕ್ಕೂಟ ವ್ಯವಸ್ಥೆಯೂ ಒಂದು. ಎಲ್ಲಾ ರಾಜ್ಯಗಳಿಗೂ ಮತ್ತು ಆ ರಾಜ್ಯ ಭಾಷೆಗೂ ಸಮಾನ ಸ್ಥಾನಮಾನ ಕೊಡುವುದು ಒಕ್ಕೂಟ ವ್ಯವಸ್ಥೆಯ ಮೂಲ ಆಶಯ. ಆದರೆ ಇದನ್ನು ಕಡೆಗಣಿಸಿ ಸ್ವಾತಂತ್ರ್ಯದ ನಂತರ ಬಂದ ಸರ್ಕಾರಗಳೆಲ್ಲವು ಹಿಂದಿ ಭಾಷೆಗೆ ಹೆಚ್ಚಿನ ಒತ್ತು ಕೊಡುತ್ತ ಬಂದಿದೆ. ಹಿಂದಿಯೇತರರ ಮೇಲೆ ಹಿಂದಿ ಹೇರಿಕೆ ಮಾಡುತ್ತ ಬಂದಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ 14ನೇ ಸೆಪ್ಟೆಂಬರ್ ನ್ನು ನಮ್ಮೆಲ್ಲರ ತೆರಿಗೆ ಹಣದಿಂದ ಹಿಂದಿ ದಿವಸ್ ನ್ನು ಹಿಂದಿಯೇತರ ರಾಜ್ಯಗಳಲ್ಲೂ ಆಚರಿಸುತ್ತಿದೆ. ಇದು ಕೇಂದ್ರ ಸರ್ಕಾರ ನಿಧಾನವಾಗಿ ರಾಜ್ಯಗಳ ಭಾಷೆಯ ಸ್ಥಾನದಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸಲು ನಡೆಸುತ್ತಿರುವ ಹುನ್ನಾರ. ನಾವು ಈ ಹಿಂದಿ ದಿವಸ್ ಆಚರಣೆಯನ್ನು ಖಂಡಿಸುತ್ತೇವೆ ಎಂದರು. 

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಲೋಕೇಶ್, ಮಂಜು, ಹೇಮಂತ್, ರಫೀಕ್, ಅಪ್ರೂಜ್, ಚಂದು, ಗಣೇಶ್, ಮಹಮ್ಮದ್ ರಫೀಕ್, ಪ್ರಮೋದ್, ಮಂಜುನಾಥ್, ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News