ತುಮಕೂರಿನ ಕ್ಲಸ್ಟರ್‌ ರದ್ಧು ನಿರ್ಧಾರಕ್ಕೆ ಡಾ.ಜಿ.ಪರಮೇಶ್ವರ್ ಖಂಡನೆ

Update: 2019-09-14 18:12 GMT

ಬೆಂಗಳೂರು, ಸೆ.14: ತುಮಕೂರಿನಲ್ಲಿ ತೆರೆಯಲು ನಿಶ್ಚಯಿಸಿದ್ದ ಸ್ಪೋರ್ಟ್ಸ್ ಆ್ಯಂಡ್‌ ಫಿಟ್‌ನೆಸ್‌ ಗೂಡ್ಸ್‌ ಕ್ಲಸ್ಟರ್‌ನನ್ನು ರದ್ದುಪಡಿಸಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರ ನಿರ್ಧಾರವನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಖಂಡಿಸಿದ್ದಾರೆ.

ತುಮಕೂರು ಜಿಲ್ಲೆ ಕ್ರೀಡೆಗೆ ಸೂಕ್ತವಾದ ಸ್ಥಳವಾಗಿದೆ. ಹಿಂದಿನ‌ ನಮ್ಮ‌ ಸರಕಾರ ಸ್ಪೋರ್ಟ್ಸ್‌ ಆ್ಯಂಡ್‌ ಫಿಟ್‌ನೆಸ್‌ ಗೂಡ್ಸ್‌ ಕ್ಲಸ್ಟರ್‌ ತೆರೆಯಲು ನಿರ್ಧರಿಸಿತ್ತು. ಆದರೆ ಬಿಜೆಪಿ ಸರಕಾರ ಇಲ್ಲಿಂದ ಈ ಕ್ಲಸ್ಟರ್‌ ಬೇಡವೆಂಬ ನಿರ್ಧಾರಕ್ಕೆ ಬಂದಿರುವ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ಸರಕಾರದ ಈ ನಿರ್ಧಾರ ಖಂಡನಾರ್ಹ. ಇದರ ಜೊತೆಗೆ ಬೀದರ್‌ ಹಾಗೂ ಧಾರವಾಡದಲ್ಲಿ ತೆರೆಯಲು ಹೊರಡಿದ್ದ ಕೃಷಿ ಹಾಗೂ ಸೋಲಾರ್‌ ಕ್ಲಸ್ಟರ್‌‌ ಅನ್ನೂ ನಿಲ್ಲಿಸಿ ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಹೊರಟಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರ ಶಿವಮೊಗ್ಗ ಆಗಿರಬಹುದು. ಆದರೆ ಅವರು ಒಂದು ಜಿಲ್ಲೆಗೆ ಸೀಮಿತವಾದ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು.

ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ನಿರ್ಧಾರ ಕೂಡಲೇ ಕೈ ಬಿಟ್ಟು ಹಿಂದಿನ ಸರಕಾರದ ನಿರ್ಧಾರದಂತೆ ಕ್ಲಸ್ಟರ್‌ ನಿರ್ಮಾಣವಾಗಲು ಬಿಡಬೇಕು ಎಂದು ಆಗ್ರಹಿಸಿದ್ದಾರೆ. ತುಮಕೂರಿನಲ್ಲಿನ ಕ್ಲಸ್ಟರ್‌ ನಿರ್ಮಾಣಕ್ಕೆ ಸರಕಾರ ಸಂಪೂರ್ಣ ಹಣಕಾಸಿನ‌ ನೆರವು ನೀಡುವಂತೆಯೂ ಇದೇ ವೇಳೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News