ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ: ಅನರ್ಹ ಶಾಸಕ ನಾರಾಯಣಗೌಡ

Update: 2019-09-14 18:27 GMT

ಮಂಡ್ಯ, ಸೆ.14: ದೇವೇಗೌಡರ ಕುಟುಂಬ ದೇಶಕ್ಕೆ ಕೊಡುಗೆ ಏನು ಕೊಟ್ಟಿಲ್ಲ. ಕುಟುಂಬಕ್ಕಷ್ಟೇ ಸೀಮಿತ ಎಂದು ಕೆ.ಆರ್.ಪೇಟೆಯ ಅನರ್ಹ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣಗೌಡ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಜೆಡಿಎಸ್ ನಾಯಕರುಗಳು ಮೊನ್ನೆ ತುಂಬಾ ಹೀನಾಯವಾಗಿ ಮಾತನಾಡಿ ಹೋಗಿದ್ದಾರೆ. ಕಳೆದ ಐದು ವರ್ಷದಿಂದ ಇವರ ಕುಟುಂಬ ಹಾಗು ದೇವೇಗೌಡರ ಹೆಣ್ಣು ಮಕ್ಕಳು ಮಾನಸಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಅಣ್ಣ-ತಮ್ಮಂದಿರು ದೇಶಕ್ಕೆ ಕೊಡುಗೆ ಏನು ಕೊಟ್ಟಿಲ್ಲ. ಕುಟುಂಬಕ್ಕಷ್ಟೇ ಇವರು ಸೀಮಿತ. ನಾರಾಯಣಗೌಡ ಚಂಗಲು, ಎಂಜಲು ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ. ರೇವಣ್ಣಗೆ ನಾಚಿಕೆ ಆಗಬೇಕು. ಅವರೂ ಹೋಟೇಲ್ ಉದ್ಯಮ ಮಾಡಿಲ್ವಾ? ಎಂದು ಕಿಡಿಕಾರಿದರು.

ನನಗೆ ಟಿಕೆಟ್ ಏಕೆ ಕೊಟ್ಟರು? ಮಾಜಿ ಸ್ಪೀಕರ್ ಕೃಷ್ಣರನ್ನು ಕೆ.ಆರ್.ಪೇಟೆಯಿಂದ ಓಡಿಸಬೇಕಿತ್ತು, ಅದಕ್ಕೆ ಕೊಟ್ಟರು. ರೇವಣ್ಣ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ರಾಜ್ಯದ ಎಲ್ಲ ಕಂಟ್ರ್ಯಾಕ್ಟರ್ ಗಳಿಗೆ ರೇವಣ್ಣ ಬಗ್ಗೆ ಗೊತ್ತು. ನನಗೆ ಕೊಡೋದು, ತೆಗೆದುಕೊಳ್ಳೋದನ್ನು ಹೇಳಿ ಕೊಟ್ಟಿದ್ದು ರೇವಣ್ಣ ಎಂದು ಅವರು  ದೂರಿದರು.

ದೇವೇಗೌಡರ ಕೈಲಿ ಮಕ್ಕಳನ್ನು ಕಂಟ್ರೋಲ್ ಮಾಡಲು ಆಗಲ್ವಾ? ದೇವೇಗೌಡರು ಒಕ್ಕಲಿಗನಾಗಿ ಹುಟ್ಟಬಾರದಿತ್ತು ಎಂದಿದ್ದಾರೆ. ಆದರೆ, ಅವರನ್ನು ಸಿಎಂ, ಪಿಎಂ ಮಾಡಿದ್ದು ಒಕ್ಕಲಿಗರೇ. ದೇವೇಗೌಡರು ದೇಶ ಪ್ರೇಮಿಯಾಗಲಿ, ಕುಟುಂಬದ ಪ್ರೇಮಿಯಾಗೋದು ಬೇಡ ಎಂದು ಅವರು ವ್ಯಂಗ್ಯವಾಡಿದರು.

ಡಿಕೆಶಿ ಒಳಗೆ ಹೋಗಲು ಯಾರು ಕಾರಣ ಎಂಬುದು ಶೀಘ್ರ ಗೊತ್ತಾಗಲಿದೆ. ಇದರಲ್ಲಿ ಸಿದ್ದರಾಮಯ್ಯ, ಬಿಜೆಪಿ ಪಾತ್ರವಿಲ್ಲ. ಸಮುದಾಯದ ಬೆಳೆಯಬಾರದು ಎಂದು ಜೈಲಿಗೆ ಕಳುಹಿಸಿದ್ರು, ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ಅವರು ಆಪಾದಿಸಿದರು.

ಕುಮಾರಸ್ವಾಮಿ ನನ್ನ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ. ನಮ್ಮ ಯಡಿಯೂರಪ್ಪ ಕೊಡುತ್ತಾರೆ. ಅದನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ. ಜೆಡಿಎಸ್‍ನಲ್ಲಿ ಮತ್ತೆ 20 ಜನ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದೂ ಅವರು ಹೇಳಿದರು.

ಮಾಜಿ ಸಚಿವ ಪುಟ್ಟರಾಜು ಒಬ್ಬ ಸುಳ್ಳುಗಾರ. ಅವರು ಸಂಸದರಾಗಿದ್ದಾಗ ಕೆ.ಆರ್ ಪೇಟೆಗೆ ಏನು ಕೊಟ್ಟರು? ನಾವು ಓಟು ಹಾಕಿಲ್ವಾ? ಮಂತ್ರಿ ಮಾಡಲಿಲ್ವ? ಎಷ್ಟು ಅನುದಾನ ಕೊಟ್ಟಿದ್ದಾರೆ. ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ನಾರಾಯಣಗೌಡ ಪುಟ್ಟರಾಜು ವಿರುದ್ಧವೂ ವಾಗ್ದಾಳಿ ನಡೆಸಿದರು.

ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಗೊತ್ತಿಲ್ಲ. ಜೆಡಿಎಸ್ ನಾಯಕರು, ಕುಮಾರಸ್ವಾಮಿ ಸುಳ್ಳುಗಳೇ ನಿಖಿಲ್ ಸೋಲಿಗೆ ಕಾರಣ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ತಮ್ಮ ಕಚೇರಿಗೆ ಸೇರಿಸುತ್ತಿರಲಿಲ್ಲ ಎಂದೂ ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News