ರಾಜ್ಯದ ಹೇಡಿ ಸರಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ: ಸಿದ್ದರಾಮಯ್ಯ

Update: 2019-09-15 13:26 GMT

ಬೆಂಗಳೂರು, ಸೆ. 15: ‘ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ 36 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರದಿಂದ ಇಲ್ಲಿಯವರೆಗೆ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಐವರು ರೈತರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೆ ರೀತಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಇದ್ದೂ ಸತ್ತಂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಲ್ಗುಣದಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ, 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅತಿವೃಷ್ಟಿ ಬಂದೆರಗಿತು. ನಮ್ಮ ಕಾಲದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿದಾಗ ನಮ್ಮ ಸರಕಾರ ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಧಾರೆಯಂತ ಯೋಜನೆಗಳ ಮೂಲಕ ನೆರವಾಗಿ ಆತ್ಮಹತ್ಯೆಯ ಸರಣಿಯನ್ನು ತಡೆದಿದ್ದೆವು’ ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡಿದ್ದಾರೆ.

ಪ್ರಾಯಶ್ಚಿತ ಆಗುತ್ತಿತ್ತು: ‘ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ, ಮೋದಿ ಹಾಜರು ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ ಮಾಡಿಕೊಂಡಂತಾಗುತ್ತಿತ್ತು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಸಿದ್ದರಾಮಯ್ಯ ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಎಲ್ಲಿ ?: ‘2009ರಲ್ಲಿ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಧಾವಿಸಿ ಬಂದು ಸಮೀಕ್ಷೆ ನಡೆಸಿ ತಕ್ಷಣ 1,500ಕೋಟಿ ರೂ.ಪರಿಹಾರ ಘೋಷಿಸಿದ್ದರು. ಈಗಿನ ಪ್ರಧಾನಿ ಎಲ್ಲಿದ್ದಾರೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕ್ರೌರ್ಯ ನಿಲ್ಲಿಸಿ: ‘ಅತಿವೃಷ್ಟಿ ಪೀಡಿತ ರೈತರ ಬ್ಯಾಂಕುಗಳಲ್ಲಿನ ಸಾಲ ಬಾಕಿಗಾಗಿ ನೋಟೀಸ್ ಜಾರಿ ಮಾಡಿ ಕಿರುಕುಳು ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರಕಾರಕ್ಕೇನಾದರೂ ಒಂದಿಷ್ಟು ಮಾನವೀಯತೆ ಎನ್ನುವುದಾದರೂ ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಅತಿವೃಷ್ಠಿ ಪೀಡಿತ ಪ್ರದೇಶಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದಂತೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕೇಂದ್ರ ಸರಕಾರ ದಿವಾಳಿಯಾಗಿ ಹೋಗಿರುವ ಸೂಚನೆ ಇದು. ಇದು ನಿಜವಲ್ಲದೆ ಇದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ರೈತರನ್ನು ಕೊಲ್ಲುತ್ತೀದ್ದೀರಿ

ಕರ್ನಾಟಕದಲ್ಲಿ ಸರಕಾರ ಬದುಕಿದೆಯಾ.? ನೆರೆಯಿಂದ ಆಶ್ರಯ ಕಳೆದುಕೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರಕಾರ ನೀಡಿದ ಪರಿಹಾರದ ಚೆಕ್‌ಗಳು ಬೌನ್ಸ್ ಆಗ್ತಾ ಇವೆ, ಇಲ್ಲಿಯವರೆಗೂ ಕೇಂದ್ರದಿಂದ ಬಿಡಿಗಾಸು ಪರಿಹಾರ ಬಂದಿಲ್ಲ. ಯಡಿಯೂರಪ್ಪನವರೇ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ನೀವು ಅಕ್ಷರಶಃ ರೈತರನ್ನು ಕೊಲ್ಲುತ್ತಿದ್ದೀರಿ’

-ಜೆಡಿಎಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News