ಹಿಂದಿ ಭಾಷೆ ಪರ ಬ್ಯಾಟಿಂಗ್ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-09-15 15:04 GMT

ಧಾರವಾಡ, ಸೆ. 15: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಒಂದು ದೇಶ-ಒಂದು ಭಾಷೆ’ ಅಗತ್ಯವಿದೆ ಎಂಬ ಹೇಳಿಕೆಯನ್ನು ಸಮರ್ಥಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿಂದಿ ಬೇಡ. ಆದರೆ, ಇಂಗ್ಲಿಷ್ ಬೇಕೆಂದು ಹೇಳುವವರ ತಾತ ಮುತ್ತಾತರೇನು ಇಂಗ್ಲಿಷ್‌ನವರೇ? ಎಂದು ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ ಹಿಂದಿ ಕಲಿಯಬೇಕೆಂಬ ಉದ್ದೇಶದಿಂದ ಅಮಿತ್ ಶಾ ಹೇಳಿದ್ದಾರೆ. ಅಂದರೆ ಕನ್ನಡ ನಿರ್ಲಕ್ಷ್ಯ ಮಾಡಬೇಕೆಂಬ ಭಾವನೆಯಲ್ಲ ಎಂದು ಎಂದು ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇಂಗ್ಲಿಷ್ ಕಲಿಯಲು ತಯಾರಿದ್ದೇವೆ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸ್ವಾಗತಿಸುವ ಒಂದು ವರ್ಗವೂ ಇದೆ. ಆದರೆ, ಹಿಂದಿ ಕಲಿಯಬೇಕೆಂದು ಹೇಳಿದರೆ ಏಕೆ ವಿರೋಧಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಮೆಟ್ರೋದಲ್ಲಿ ಇಂಗ್ಲಿಷ್ ಫಲಕವಿದ್ದರೆ ನಡೆಯುತ್ತದೆ. ಆದರೆ, ಹಿಂದಿ ನಾಮಫಲಕ ತೆಗೆಯಬೇಕೆಂದರೆ ಯಾವ ನ್ಯಾಯವೋ ತಿಳಿಯದು ಎಂದು ಜೋಶಿ ಪ್ರಶ್ನಿಸಿದರು.

ಒತ್ತಡ ಹಾಕುತ್ತೇವೆ: ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಕೇಂದ್ರ ಸರಕಾರ ರಾಜ್ಯಕ್ಕೆ ಮನಮೋಹನ್ ಸಿಂಗ್ ಸರಕಾರಕ್ಕಿಂತ ಹೆಚ್ಚು ಅನುದಾನ ನೀಡಿದೆ. ನೆರೆ ಪರಿಹಾರ ವಿಳಂಬಕ್ಕೆ ಹತ್ತು ರಾಜ್ಯಗಳಲ್ಲಿ ನೆರೆ ಬಂದಿದ್ದು, ಹೀಗಾಗಿ ಕೇಂದ್ರ ಅನುದಾನ ನೀಡಲು ವಿಳಂಬ ಮಾಡುತ್ತಿದೆ ಎಂದು ಜೋಶಿ ಹೇಳಿದರು.

ಈಗಾಗಲೇ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿದ್ದು, ಶೀಘ್ರವೇ ಅನುದಾನ ಬರುವ ನಿರೀಕ್ಷೆ ಇದೆ. ಜತೆಗೆ ನಾವು ಮತ್ತೊಮ್ಮೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ ಎಂದ ಅವರು, ಶಿವಕುಮಾರ್ ಪ್ರಕರಣದಲ್ಲಿ ನಾವೇನು ರಾಜಕೀಯ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ ಅವರ ಪರ ಒಂದು ಜನಾಂಗವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿದರು. ಆದರೆ, ಅವರು ನೂರಾರು ಕೋಟಿ ರೂ.ಯಾವಾಗ ಎಲ್ಲಿಂದ ಬಂತು ಎಂದು ಜನರಿಗೆ ತಿಳಿಸಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್ ಇವರ ಜಾಮೀನನ್ನು ರದ್ದು ಮಾಡಿವೆ. ಹೀಗಿರುವಾಗ ಹೇಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಅಲ್ಲಗಳೆದರು.

ಮಹದಾಯಿ ವಿವಾದವನ್ನು ಗೋವಾ ಮುಖ್ಯಮಂತ್ರಿ ಕೋರ್ಟ್ ಮೂಲಕವೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಆದರೂ, ನಾವು ಜಲ ಸಂಪನ್ಮೂಲ ಸಚಿವರ ಮೂಲಕ ಇನ್ನೂ ಮೂರು ಸಿಎಂಗಳ ಜತೆ ಮಾತುಕತೆಗೆ ಪ್ರಯತ್ನಿಸುತ್ತೇವೆ. ಮೂರು ರಾಜ್ಯದಲ್ಲಿ ಒಂದೆ ಪಕ್ಷವಿದ್ದ ಮಾತ್ರಕ್ಕೆ ಸಮಸ್ಯೆ ಇತ್ಯರ್ಥ ಆಗುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News