ಕೇಂದ್ರ ಸರಕಾರ ಹಿಂದಿ ಹೇರಿಕೆ ಮಾಡುತ್ತಿಲ್ಲ: ಜಗದೀಶ್ ಶೆಟ್ಟರ್

Update: 2019-09-15 15:12 GMT

ಹುಬ್ಬಳ್ಳಿ, ಸೆ.15: ಕೇಂದ್ರ ಸರಕಾರ ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಹಿಂದಿ ದಿವಸ್ ಆಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಭಾಷೆ ದೇಶ ಭಾಷೆಯಾಗಬೇಕು ಎಂದು ಹೇಳಿದ್ದಾರೆ. ಇದು ಹಿಂದಿ ಭಾಷೆಯನ್ನು ದೇಶದ ಜನರ ಮೇಲೆ ಹೇರಿಕೆ ಮಾಡುವುದಲ್ಲ ಎಂದು ತಿಳಿಸಿದರು.

ಹಿಂದಿ ಭಾಷೆಯನ್ನು ಒಂದು ಸಂಪರ್ಕ ಭಾಷೆಯಾಗಿ ಕಲಿಯಲು ಪ್ರೋತ್ಸಾಹಿಸಲಾಗುತ್ತಿರುವುದೆ ಇದರ ಹಿಂದಿನ ಮರ್ಮ. ಒಂದು ದೇಶ, ಒಂದು ಭಾಷೆ ಎನ್ನುವ ನಿಟ್ಟಿನಲ್ಲಿ ಹಿಂದಿ ಭಾಷೆಯನ್ನು ಕಲಿತರೆ ಏನೂ ತಪ್ಪಿಲ್ಲ. ಹಾಗೆಂದು ದೇಶದ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಈಗಾಗಲೇ ಚರ್ಚೆಯಾಗಿದೆ. ಈ ಬಗ್ಗೆ ನಿರ್ಧಾರ ಜಾರಿಗೆ ಬರಲು ಸ್ವಲ್ಪಸಮಯ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದಿಲ್ಲಿಗೆ ತೆರಳಿರುವ ಬಗ್ಗೆ ಪ್ರಶ್ನೆ ಕೇಳಿದ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ತಮ್ಮ ಇಲಾಖೆಯ ಕುರಿತು ಚರ್ಚಿಸಲು ದಿಲ್ಲಿಗೆ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಅಲ್ಲದೆ ಜೆಡಿಎಸ್ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News