ಒಂದು ಭಾಷೆ ಹೇರಿಕೆ ರಾಷ್ಟ್ರದ ಐಕ್ಯತೆಗೆ ಧಕ್ಕೆ: ಸಿಪಿಎಂ

Update: 2019-09-15 16:56 GMT

ಬೆಂಗಳೂರು, ಸೆ.15: ಹಿಂದಿ ರಾಷ್ಟ್ರ ಭಾಷೆಯಾಗಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಪ್ರತಿಪಾದನೆಯನ್ನು ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದ್ದು, ಒಂದು ಭಾಷೆ ಹೇರಿಕೆ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗಲಿದೆ ಎಂದು ಪ್ರತಿಪಾದಿಸಿದೆ.

ಭಾರತದಲ್ಲಿ ಅನೇಕ ಭಾಷೆಗಳಲ್ಲಿ ಮಾತನಾಡುವ ಜನರಿದ್ದಾರೆ. ಭಾಷೆ ಒಂದು ಸಂಸ್ಕೃತಿಯ ಪ್ರತೀಕವಾಗಿದೆ. ಒಂದೊಂದು ಭಾಷೆ ಒಂದೊಂದು ಪ್ರತ್ಯೇಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆ ಅರ್ಥದಲ್ಲಿ ನಮ್ಮ ದೇಶ ಭಾರತ ಹಲವು ಭಾಷೆಗಳ, ಹಲವು ಸಂಸ್ಕೃತಿಗಳ ದೇಶ. ವೈಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ಹೀಗಾಗಿ, ದೇಶದ ಮೇಲೆ ಒಂದು ಭಾಷೆಯನ್ನು ಹೇರುವುದರೊಂದಿಗೆ ದೇಶದ ಐಕ್ಯತೆ ಬಲಗೊಳ್ಳುವುದಿಲ್ಲ ಎಂದು ಸಿಪಿಎಂ ಹೇಳಿದೆ.

ನಾವು ಭಾರತ ದೇಶದ ಜನತೆ. ಇಲ್ಲಿಯ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸಬೇಕು. ಎಲ್ಲ ಭಾಷೆಗಳ ಅಭಿವೃದ್ಧಿ ಕೇಂದ್ರ ಸರಕಾರದ ಧೋರಣೆಯಾಗಬೇಕು. ಒಂದು ದೇಶ, ಒಂದು ಭಾಷೆ ಘೋಷಣೆಗೆ ಅವಕಾಶ ಕೊಟ್ಟರೆ ಅದು ಅಪಾಯಕಾರಿ ಆಯಾಮ ಪಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಹಿಂದಿ ಹೇರಿಕೆ ವಿರುದ್ಧದ ಹೋರಾಟ ಹಿಂದಿ ಭಾಕರ ವಿರುದ್ಧದ ಹೋರಾಟವಾಗಿ ಪರಿಗಣಿಸಬಾರದು. ಕರ್ನಾಟಕದಲ್ಲಿ ಹಿಂದಿ ಮಾತೃ ಭಾಷೆ ಹೊಂದಿದ ಜನರಿದ್ದಾರೆ. ಅವರಿಗೆ ಆತಂಕ ಉಂಟುಮಾಡುವ ಪ್ರಯತ್ನಕ್ಕೆ ಯಾರೂ ಮುಂದಾಗಬಾರದು ಎಂದು ಸಿಪಿಎಂ ಕಾರ್ಯದರ್ಶಿ ಯು.ಬಸವರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News