ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

Update: 2019-09-15 17:07 GMT

ಬೆಂಗಳೂರು, ಸೆ.15: ಮೈತ್ರಿ ಸರಕಾರದ ಅವಧಿಯಲ್ಲಿ ನೇಮಕವಾಗಿದ್ದ ಎಲ್ಲ ಅಕಾಡೆಮಿಗಳ ನೇಮಕಾತಿಗಳನ್ನು ಯಡಿಯೂರಪ್ಪ ಸಿಎಂ ಆದ ಮೇಲೆ ರದ್ಧು ಮಾಡಿದ ಬಳಿಕ ಹೊಸದಾಗಿ ಅಧ್ಯಕ್ಷ ಸ್ಥಾನಗಳ ನೇಮಕ ನಡೆಯಲಿದ್ದು, ಈಗಾಗಲೇ ಆಕಾಂಕ್ಷಿಗಳಲ್ಲಿ ಪೈಪೋಟಿ ಆರಂಭವಾಗಿದೆ.

ರಾಜ್ಯ ಸರಕಾರ ರದ್ಧು ಮಾಡಿರುವ ಅಕಾಡೆಮಿಗಳಿಗೆ ಹಲವರ ವಿರೋಧದ ನಡುವೆಯೂ ನೇಮಕಾತಿ ನಡೆಸಲು ಮುಂದಾಗಿದ್ದು, ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಪೈಪೋಟಿ ಆರಂಭವಾಗಿದೆ. ಹಲವು ಜನರು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರಗಳನ್ನು ಸಲ್ಲಿಸಿದ್ದಾರೆ.

ಸಿಎಂ ಆದ ಬಳಿಕ ಯಡಿಯೂರಪ್ಪ ಎಲ್ಲ ಅಕಾಡೆಮಿಗಳ ಅಧ್ಯಕ್ಷ ಸ್ಥಾನಗಳನ್ನು ರದ್ಧು ಮಾಡಿ, ಅದಕ್ಕೆ ಇಲಾಖೆಯ ನಿರ್ದೇಶಕರಿಗೆ ಪ್ರಭಾರ ಅಧ್ಯಕ್ಷರನ್ನಾಗಿ ನಿಯೋಜಿಸಿದ್ದರು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಸಿ.ಟಿ.ರವಿ ಅಧಿಕಾರ ವಹಿಸಿಕೊಂಡ ಬಳಿಕ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆ ಮರು ಜೀವ ಪಡೆದುಕೊಂಡಿದೆ.

ಕನ್ನಡ ಪುಸ್ತಕ ಪ್ರಾಧಿಕಾರ, ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಮಾಧ್ಯಮ ಅಕಾಡೆಮಿ, ಉರ್ದು ಅಕಾಡೆಮಿ, ಚಲನಚಿತ್ರ ಅಕಾಡೆಮಿ ಸೇರಿದಂತೆ 15 ಅಕಾಡೆಮಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ನಡೆಯಬೇಕಿದೆ.

ಅಕಾಡೆಮಿಗಳ ಅಧ್ಯಕ್ಷ ಹುದ್ದೆಗಳ ಆಕಾಂಕ್ಷಿಯಾಗಿರುವವರು ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಮನವಿಗಳನ್ನು ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವರು ಉಪ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿ ಒತ್ತಡ ತರುತ್ತಿದ್ದಾರೆ. ಇಲಾಖೆಯ ಸಚಿವರಿಗೂ ಹಲವರು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅಕಾಡೆಮಿಗಳ ಅಧ್ಯಕ್ಷ ಹಾಗೂ ಸದಸ್ಯರ ನೇಮಕಕ್ಕೆ ಯಾವ ಮಾನದಂಡ ಅನುಸರಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಬಿಜೆಪಿ ವಲಯದಲ್ಲಿರುವ ಅಥವಾ ಬಲಪಂಥೀಯ ಧೋರಣೆ ಉಳ್ಳವರಿಗೆ ಅವಕಾಶ ಸಿಗಬಹುದು. ಅಲ್ಲದೆ, ಆರೆಸ್ಸೆಸ್ ನಿಲುವಿನ ಹಿನ್ನೆಲೆಯುಳ್ಳವರೂ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಮುಖ್ಯಮಂತ್ರಿಯ ಆಪ್ತ ವಲಯ ಹಾಗೂ ಶಿಫಾರಸ್ಸಿನ ಮೇರೆಗೆ ಕೆಲವು ಅಕಾಡೆಮಿಗಳ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯೂ ಇದೆ. ಸಚಿವರಲ್ಲದೆ, ಶಾಸಕರ ಬಳಿಯೂ ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಭರವಸೆ ನೀಡುವುದು ಕಷ್ಟ. ಆದರೆ, ಸದಸ್ಯ ಸ್ಥಾನ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News