ರೈತರ ಸಾಲ ಮನ್ನಾ ಯೋಜನೆ: ಕೊಡಗಿಗೆ 32.64 ಕೋಟಿ ರೂ. ಬಿಡುಗಡೆ

Update: 2019-09-15 17:22 GMT

ಮಡಿಕೇರಿ, ಸೆ.15: ಕೊಡಗು ಜಿಲ್ಲೆಯ ರೈತರಿಗೆ ಸಹಕಾರಿ ಸಾಲ ಮನ್ನಾ ಯೋಜನೆಯಡಿ ಹಿಂದಿನ ಸಮ್ಮಿಶ್ರ ಸರಕಾರ ಬಾಕಿ ಉಳಿಸಿಕೊಂಡಿದ್ದ ಸುಮಾರು 48.25 ಕೋಟಿ ರೂ.ಗಳ ಪೈಕಿ 32.64 ಕೋಟಿ ರೂ.ಗಳನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಿಡುಗಡೆ ಮಾಡಿದೆ. 

ಹಿಂದಿನ ಸಮ್ಮಿಶ್ರ ಸರಕಾರದ ಸಹಕಾರಿ ಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯ ಸಹಕಾರ ಸಂಘಗಳಲ್ಲಿ 2018ರ ಜು.10ಕ್ಕೆ ಅಲ್ಪಾವಧಿ ಬೆಳೆಸಾಲ ಪಡೆದು ಹೊರ ಬಾಕಿ ಉಳಿಸಿಕೊಂಡಿದ್ದ 32,903 ರೈತರ ಗರಿಷ್ಠ ತಲಾ ಒಂದು ಲಕ್ಷ ರೂ. ಸಾಲ ಮನ್ನಾದಂತೆ ಜಿಲ್ಲೆಗೆ 254.81 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಬೇಕಿತ್ತು. ಈ ಕುರಿತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೂಕ್ತ ದಾಖಲೆಗಳನ್ನು ಒದಗಿಸಿದ್ದರೂ, ಸರಕಾರ 16,673 ರೈತರ 116.71 ಕೋಟಿ ರೂ.ಗಳು ಮಾತ್ರ ಮನ್ನಾಕ್ಕೆ ಅರ್ಹವೆಂದು ಪರಿಗಣಿಸಿ ಈ ಪೈಕಿ 10,421 ರೈತರಿಗೆ 68.45 ಕೋಟಿ ರೂ.ಗಳನ್ನು ಮಾತ್ರ ಹಿಂದಿನ ಸರಕಾರ ಬಿಡುಗಡೆಗೊಳಿಸಿ ಉಳಿದ 6,252 ರೈತರ 48.25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಬಾಕಿ ಉಳಿಸಿಕೊಂಡಿತ್ತು.

ಈ ಸಂಬಂಧ ಜಿಲ್ಲೆಯ ಎಲ್ಲಾ ರೈತರ ಪರವಾಗಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ (ಬಾಂಡ್) ಅವರು ಸಹಕಾರ ಸಂಘಗಳ ವ್ಯಾಪ್ತಿಯ ಎಲ್ಲಾ 32,903 ಮಂದಿ ರೈತರ ಸಾಲ ಮನ್ನಾ ಮೊತ್ತವನ್ನು ಬಿಡುಗಡೆ ಮಾಡಿಸಿಕೊಡುವಂತೆ ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳಿಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಸಹಕಾರ ಕೇಂದ್ರ ಬ್ಯಾಂಕ್‍ನ ಬೇಡಿಕೆಯನ್ನು ವಿಶೇಷವಾಗಿ ಪರಿಗಣಿಸಿ, ಸಾಲ ಮನ್ನಾ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ 16673 ಮಂದಿಯ ಪೈಕಿ ಈವರೆಗೆ ಬಿಡುಗಡೆಗೆ ಬಾಕಿ ಉಳಿಸಿಕೊಂಡಿದ್ದ 6252 ರೈತರ 48.25 ಕೋಟಿ ರೂ.ಗಳ ಪೈಕಿ 32.64 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿದ್ದಾರೆ.

ಸೆ.13ರಂದೇ ಈ ಸಂಬಂಧ ಆದೇಶ ಹೊರಡಿಸಿದ ಮುಖ್ಯಮಂತ್ರಿಗಳು ತಕ್ಷಣ ರೈತರ ಫಲಾನುಭವಿ ರೈತರ ಖಾತೆ ಹಣ ಜಮಾ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು, ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಜಿಲ್ಲೆಯ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಅಲ್ಲದೆ ಜಿಲ್ಲೆಯಲ್ಲಿನ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಬಾಕಿ ಇರುವ ಮೊತ್ತವನ್ನು ಸರಕಾರದ ಹಂತದಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News