ಕಳಸದಲ್ಲಿ ಸಂಸ್ಕೃತ ಲೋಹ ಶಾಸನ ಪತ್ತೆ

Update: 2019-09-15 17:29 GMT

ಚಿಕ್ಕಮಗಳೂರು, ಸೆ.15: ಕಳಸ ಚಂದ್ರನಾಥ ಬಸದಿಯಲ್ಲಿ ಸಾಂತರದೊರೆಗಳ ಕಾಲದ 14ನೆಯ ಶತಮಾನದ ಸಂಸ್ಕೃತ ಲೋಹಶಾಸನ ಪತ್ತೆ ಹಚ್ಚಲಾಗಿದೆ.

ವಿಜಯನಗರ ಸಾಮ್ರಾಜ್ಯದ ಮಹಾಮಂಡಲೇಶ್ವರರಾದ ಕಳಸ-ಕಾರ್ಕಳರಾಜ್ಯದ ದೊರೆ ಭೈರವ ಅರಸರ ಬೇಸಿಗೆ ರಾಜಧಾನಿಯಾಗಿದ್ದ ಭದ್ರತೀರದ ಕಳಸ ಪಟ್ಟಣದ ಕೆಳಂಗಡಿ ಶ್ರೀಚಂದ್ರನಾಥ ಬಸದಿ ಇತಿಹಾಸ ಪ್ರಸಿದ್ಧ. ಈ ಬಸದಿಯಲ್ಲಿ ನಿತ್ಯ ಪೂಜೆಗೊಳ್ಳುತ್ತಿದ್ದ ಶ್ರೀಮಹಾವೀರಸ್ವಾಮಿ ತೀರ್ಥಂಕರರ ಪಂಚಲೋಹದ ವಿಗ್ರಹದ ಹಿಂಭಾಗದಲ್ಲಿ ಬರೆಯಲ್ಪಟ್ಟ ಸಂಸ್ಕೃತ ಭಾಷೆಯ ನಾಗರಿಲಿಪಿಯ ಅತ್ಯಮೂಲ್ಯ ಶಾಸನವನ್ನು ಕಳಸದ ಹವ್ಯಾಸಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧಿಸಿದ್ದಾರೆ.

ವಿಕ್ರಂ ಸಂವತ್ಸರದ 1380ನೆಯ ವರ್ಷ ಮಾಘಮಾಸ ಕಾಲಮಾನ ಉಲ್ಲೇಖವಿರುವ ಈ ಲೋಹಶಾಸನ ಹೊಯ್ಸಳ ಚಕ್ರವರ್ತಿಗಳ ಮಾಂಡಲೇಶ್ವರ ಹೊಂಬುಜ ಮೂಲದ ಕಳಸ ಶಾಖೆ ಸಾಂತರ ದೊರೆಗಳ ಆಳ್ವಿಕೆ ಕಾಲದ್ದೆನ್ನಲಾಗಿದೆ. ಕ್ರಿ.ಶ.1438ರಲ್ಲಿ ವೀರಪಾಂಡ್ಯ ದೇವರಸನಿಂದ ನಿರ್ಮಿಸಲ್ಪಟ್ಟ ಲೋಹಶಾಸನವನ್ನು ಅರ್ಚಕ ಅಜಿತ್‍ ಪ್ರಸಾದ್ ಇಂದ್ರ ಸಹಕಾರದಿಂದ ಪತ್ತೆ ಹಚ್ಚಿರುವುದಾಗಿ ತಿಳಿಸಿರುವ ಪಾಂಡುರಂಗ, ಜೈನಧರ್ಮದ 24ನೆಯ ತೀರ್ಥಂಕರರಾದ ವರ್ಧಮಾನ ಮಹಾವೀರ-ಚತುರ್ವಿಂಶತಿ ತೀರ್ಥಂಕರರ ಸಹಿತ ಶಾಸನವಾಗಿದೆ. ಇದನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಶ್ರೀಕ್ಷೇತ್ರ ಹೊಂಬುಜದಲ್ಲಿ ಅಕ್ಟೋಬರ್ ನಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News