ರಾಜಕಾರಣಿಗಳಿಗೆ ಜನಸೇವೆ ಮಾಡುವ ಬದ್ಧತೆ ಇರಬೇಕು: ಸಿದ್ದರಾಮಯ್ಯ
ಮಂಡ್ಯ, ಸೆ.15: ರಾಜಕಾರಣಕ್ಕೆ ಬಂದ ಜನಪ್ರತಿನಿಧಿಗಳಿಗೆ ಜನಸೇವೆ ಮಾಡುವ ಬದ್ಧತೆ ಇರಬೇಕೇ ಹೊರತು ಜಾತಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಕುರುಬರ ಸಂಘ ರವಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಗರಸಭೆ, ಪುರಸಭೆ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಹಾಗು ಅತಿಥಿ ಗೃಹ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ, ಧರ್ಮ ಮಾಡಿಕೊಂಡಿರುವುದು ಮನುಷ್ಯ. ಹಾಗಂತ ಮನುಷ್ಯ-ಮನುಷ್ಯನ ನಡುವೆ ಭೇದ-ಭಾವ ಇರಬಾರದು. ಕುವೆಂಪು ಅವರು ಹೇಳಿದಂತೆ ಪ್ರತಿಯೊಬ್ಬರೂ ವಿಶ್ವಮಾನವರಾಗಿ ಹುಟ್ಟುತ್ತೇವೆ. ಬೆಳೆಯುತ್ತಾ ಜಾತಿ-ಧರ್ಮವಾಗಿ ಬೇರ್ಪಟ್ಟು ಧರ್ಮಗಳಿಗೆ ಸೀಮಿತರಾಗುತ್ತಾರೆ ಎಂದು ಅವರು ವಿಷಾದಿಸಿದರು.
ಜಾತಿ, ಧರ್ಮ ಮಾಡಲಿ. ಆದರೆ, ನಾವೆಲ್ಲ ಮನುಷ್ಯರು ಎಂಬುದನ್ನು ಮರೆಯಬಾರದು. ಪ್ರತಿಭೆಗೆ ಜಾತಿ ಸಂಕೋಲೆ ಇಲ್ಲ. ಬುದ್ಧಿವಂತಿಕೆ, ಜ್ಞಾನಕ್ಕೆ ಇಂತಿಷ್ಟೇ ಎಂದು ಸೀಮಿತವಿಲ್ಲ. ಇದೆಲ್ಲ ಮಾನವನ ಸೃಷ್ಟಿ. ಮಕ್ಕಳಿಗೆ ಗುರಿ, ಶ್ರದ್ಧೆ, ಛಲ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಅವರು ಹೇಳಿದರು.
ದ್ವೇಷ-ಅಸೂಯೆಯಿಂದ ಯಾರೂ ನಾಯಕರಾಗಲು ಸಾಧ್ಯವಿಲ್ಲ. ಜನರ ಪ್ರೀತಿ-ವಿಶ್ವಾಸ ಗಳಿಸುವುದೇ ನಾಯಕನ ಲಕ್ಷಣ. ನಾನು ರಾಜಕೀಯವಾಗಿ ಯಾವತ್ತೂ ಜಾತಿ ರಾಜಕೀಯ ಮಾಡಲಿಲ್ಲ. ಆದರೂ ನನಗೆ ಜಾತಿವಾದಿ ಪಟ್ಟ ಕಟ್ಟಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೊಟ್ಟೆ. ಅವುಗಳಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಿದೆ. ಮತ್ತೆ ಮುಖ್ಯಮಂತ್ರಿ ಆಗಿಬಿಡುತ್ತಾನೆಂದು ಜಾತಿ ಬಣ್ಣ ಕಟ್ಟಿ ಜನರ ದಾರಿ ತಪ್ಪಿಸಿದರು. ಇನ್ನು ಮುಂದೆ ಈ ರೀತಿ ದಾರಿ ತಪ್ಪಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಕೆಲ ರಾಜಕೀಯ ವಿರೋಧಿಗಳು ಸಿದ್ದರಾಮಯ್ಯ ತಮ್ಮ ಕುರುಬ ಜಾತಿಗೆ ಒಳಿತು ಮಾಡಿದ್ದಾನೆಯೇ ಹೊರತು, ಬೇರೆ ಜಾತಿಯವರಿಗೆ ಏನೂ ಮಾಡಿಲ್ಲ ಎಂದು ಹೊಟ್ಟೆಕಿಚ್ಚು, ದ್ವೇಷದಿಂದ ಹೇಳುತ್ತಾರೆ. ಅವರಿಗೆ ಮದ್ದು ಕೊಡಲು ಆಗಲ್ಲ. ಮನುಷ್ಯ-ಮನುಷ್ಯ ಪರಸ್ಪರ ಪ್ರೀತಿಸುವುದನ್ನು ಮೊದಲು ಕಲಿಯಬೇಕು ಎಂದು ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 2018-19ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರಸಭೆ ಮತ್ತು ನಗರಸಭೆ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಲ್ಲಾಜಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕರ್ನಾಟಕ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರ, ಜಿಲ್ಲಾಧ್ಯಕ್ಷ ಕೆ.ಎಚ್.ನಾಗರಾಜು, ಗಣಿಗ ರವಿಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
56 ಇಂಚು ಎದೆ ಇದ್ದರೆ ಏನು ಪ್ರಯೋಜನ?
ಪ್ರಧಾನಿ ನರೇಂದ್ರ ಮೋದಿ ಅವರು ನನಗೆ 56 ಇಂಚು ಎದೆ ಇದೆ ಎಂದು ಹೇಳಿಕೊಳ್ಳುತ್ತಾರೆ. 56 ಇಂಚು ಎದೆ ಇದ್ದರೆ ಏನು ಪ್ರಯೋಜನ? ಮಾತೃ ಹೃದಯ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
105 ವರ್ಷಗಳ ನಂತರ ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಆದರೆ, ಒಂದು ದಿನ ಬಂದು ವೈಮಾನಿಕ ಸಮೀಕ್ಷೆ ಮಾಡಲಿಲ್ಲ. ಇದುವರೆಗೂ ಒಂದೇ ಒಂದು ರೂಪಾಯಿ ಪರಿಹಾರ ಘೋಷಿಸಿಲ್ಲ ಎಂದು ಅವರು ಕಿಡಿಕಾರಿದರು.
2009ರಲ್ಲಿ ಇದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಸಾಕಷ್ಟು ನಷ್ಟವಾಗಿತ್ತು. ವಿರೋಧ ಪಕ್ಷದ ನಾಯಕನಾಗಿದ್ದ ನಾನು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಲಾಗಿ ಮಾರನೇ ದಿನವೇ ಬಂದು ವೈಮಾನಿಕ ಸಮೀಕ್ಷೆ ನಡೆಸಿ, 1,600 ಕೋಟಿ ರೂ. ಪರಿಹಾರ ಘೋಷಿಸಿದರು. ಆದರೆ, ಇಂದಿನ ಪ್ರಧಾನಿಗೆ ಅಂತಹ ಮಾತೃ ಹೃದಯ ಇಲ್ಲ ಎಂದು ಅವರು ಟೀಕಿಸಿದರು.