ಕಠಿಣ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾರನ್ನು ಬಂಧಿಸಿದ ಸರಕಾರ: ದೀರ್ಘಕಾಲ ಸೆರೆವಾಸ ಸಾಧ್ಯತೆ

Update: 2019-09-16 10:13 GMT

ಶ್ರೀನಗರ, ಸೆ.16: ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ರವಿವಾರ ಹೇರಲಾಗಿದ್ದು, ಅವರು ಎರಡು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬಂಧನದಲ್ಲಿಯೇ ಉಳಿಯುವ ಸಾಧ್ಯತೆಯಿದೆ.

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿದಂದಿನಿಂದ ಫಾರೂಕ್ ಅಬ್ದುಲ್ಲಾ ಅವರು ರವಿವಾರದ ತನಕ ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪ್ರತಿಬಂಧಕ ದಿಗ್ಬಂಧನದಲ್ಲಿದ್ದರು.

ಇಲ್ಲಿಯ ತನಕ ಅವರನ್ನು ಕ್ರಿಮಿನಲ್ ದಂಡ ಸಂಹಿತೆಯಂತೆ ಬಂಧಿಸಲಾಗಿತ್ತೆಂದು ಮೂಲಗಳು ತಿಳಿಸಿವೆ. “ಗೃಹ ಇಲಾಖೆ ಫಾರೂಕ್ ಸಾಬ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ವಯ ಅವರ ನಿವಾಸದಲ್ಲಿ  ಬಂಧಿಸಿದೆ. ಅವರ ನಿವಾಸವನ್ನು ಉಪ ಜೈಲು ಎಂದು ಘೋಷಿಸಲಾಗಿದೆ. ಅವರು ಮನೆಯಲ್ಲಿಯೇ ಇರುತ್ತಾರೆ. ಆದರೆ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಭೇಟಿಯಾಗಲು ಯಾವುದೇ ನಿರ್ಬಂಧಗಳಿಲ್ಲ, ಗೃಹ ಇಲಾಖೆಯ ಸಲಹಾ ಮಂಡಳಿ ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ವಯ ಅವರ  ಬಂಧನಕ್ಕೆ ಅನುಮತಿ ನೀಡಿದೆ'' ಎಂದು ಕಾಶ್ಮೀರ ಆಡಳಿತದ ಮೂಲವೊಂದು ತಿಳಿಸಿದೆ.

ಫಾರೂಕ್ ಅಬ್ದುಲ್ಲಾ ಅವರನ್ನು ಹಾಜರುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ  ಡಿಎಂಕೆ ನಾಯಕ ವೈಕೋ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅಪೀಲಿನ ನಂತರ ಈ ಬೆಳವಣಿಗೆ ನಡೆದಿದೆ. ಈ  ಅಪೀಲಿನ ಹಿನ್ನೆಲೆಯಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಾಡಳಿತಗಳಿಗೆ ನೋಟಿಸ್ ಜಾರಿ ಮಾಡಿದೆ.

ಆಗಸ್ಟ್ 6ರಂದು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪ್ರಶ್ನೆಗೆ ಉತ್ತರಿಸಿದ್ದ ಗೃಹ ಸಚಿವ ಅಮಿತ್ ಶಾ, ಫಾರೂಕ್ ಅಬ್ದುಲ್ಲಾ ಅವರು ಗೃಹ ಬಂಧನದಲ್ಲಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿಂದೆ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರನ್ನೂ ಸರಕಾರ ಇದೇ ಕಾಯಿದೆಯಡಿ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News