ನೆರೆ ಪರಿಹಾರ ನೀಡುವಲ್ಲಿ ಕೇಂದ್ರ, ರಾಜ್ಯ ಸರಕಾರದಿಂದ ವಿಳಂಬ: ಬೆಳಗಾವಿಯಲ್ಲಿ ರೈತರಿಂದ ‘ಬಾರುಕೋಲು ಚಳವಳಿ’

Update: 2019-09-16 14:40 GMT

ಬೆಳಗಾವಿ, ಸೆ. 16: ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ನೂರಾರು ರೈತರು ‘ಬಾರುಕೋಲು’ ಚಳವಳಿ ನಡೆಸುವ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಕೋಟೆಕೆರೆಯಿಂದ ಚನ್ನಮ್ಮ ವೃತ್ತದ ವರೆಗೂ ಬಾರುಕೋಲು ಹಿಡಿದು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ನೂರಾರು ರೈತರು, ಕೇಂದ್ರ ಹಾಗೂ ರಾಜ್ಯ ಸರಕಾರ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಕೂಡಲೇ ಕುರ್ಚಿ ಖಾಲಿ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಸ್ವರೂಪದ ನೆರೆ ಬಂದು ನಲವತ್ತೈದು ದಿನಗಳು ಕಳೆಯುತ್ತಿದೆ. ರೈತರು ಸೇರಿದಂತೆ ಜನರು ಮನೆ, ಜಮೀನು, ಜಾನುವಾರುಗಳನ್ನು ಕಳೆದುಕೊಂಡಿದ್ದು, ಬೀದಿಪಾಲಾಗಿದ್ದಾರೆ. ಆದರೆ, ಸಂತ್ರಸ್ತರಿಗೆ ನೆರವು ನೀಡಬೇಕಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರ ಈ ವರೆಗೂ ಬಿಡಿಗಾಸನ್ನು ನೀಡಿಲ್ಲ ಎಂದು ರೈತರ ದೂರಿದರು.

ರೈತರು ಪ್ರತಿಭಟನೆ ನಡೆಸಲು ನಿರ್ಮಿಸಿದ್ದ ಪೆಂಡಾಲ್ ಅನ್ನು ಏಕಾಏಕಿ ತೆರವು ಮಾಡಿದ್ದು, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ವಿರುದ್ಧ ರೈತರು ಕಿಡಿಕಾರಿದರು. ಕೂಡಲೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ಪ್ರತಿಭಟನೆಗೆ ಪೆಂಡಾಲ್ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ನೆರೆ ಪೀಡಿತ ಪ್ರದೇಶಗಳ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕು. ಜನರು ಬದುಕು ಕಟ್ಟಿಕೊಳ್ಳುವವರೆಗೆ ಸರಕಾರಗಳು ಸೂಕ್ತ ವ್ಯವಸ್ಥೆ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಚಪ್ಪಲಿ ಹರಾಜು: ಇದೇ ವೇಳೆ ಪ್ರತಿಭಟನಾ ನಿರತ ರೈತರು ನೆರೆ ಸಂತ್ರಸ್ತರಿಗಾಗಿ ತಾನು ಧರಿಸಿದ್ದ ಚಪ್ಪಲಿಗಳನ್ನು ಸಂಗ್ರಹಿಸಿ ಬಹಿರಂಗ ಹರಾಜು ಮಾಡುವ ಮೂಲಕ ಹಣ ಸಂಗ್ರಹಿಸಿದರು. ಅಲ್ಲದೆ, ರಸ್ತೆ ಮಧ್ಯದಲ್ಲೆ ಅಡುಗೆ ತಯಾರಿಸಿ ಊಟ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ನೆರೆಯಿಂದಾಗಿ ನಮ್ಮ ಹೊಲ-ಮನೆ ಎಲ್ಲವೂ ನೆರೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಬೀದಿಗೆ ಬಿದ್ದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಸೂಕ್ತ ಪರಿಹಾರ ನೀಡುವವರೆಗೂ ಇಲ್ಲೆ ಇರ್ತೀವಿ. ನಮ್ಮ ಸಮಸ್ಯೆ ಕೇಳಲು ಯಾವೊಬ್ಬ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಈವರೆಗೂ ಬಂದಿಲ್ಲ’

-ಪ್ರತಿಭಟನಾನಿತರ ರೈತರ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News