ಸೆ.17ರಿಂದ ದಸರಾ ಯುವ ಸಂಭ್ರಮ

Update: 2019-09-16 16:35 GMT

ಮೈಸೂರು,ಸೆ.16: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2019ರ ಯುವ ಸಂಭ್ರಮವು ಸೆ.17ರಿಂದ 26ರವರೆಗೆ ಒಟ್ಟು ಹತ್ತು ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಈ ಕುರಿತು ವಾರ್ತಾ ಇಲಾಖೆಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದು, ಯುವ ಸಂಭ್ರಮ ಉದ್ಘಾಟನಾ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಲು ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಕಳೆದ ವರ್ಷದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಒಟ್ಟು 162 ಕಾಲೇಜು ತಂಡಗಳು ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದವು. ಈ ಬಾರಿ ಒಟ್ಟು 260 ಕಾಲೇಜುಗಳು ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ. ಯುವ ಸಂಭ್ರಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ಹೆಚ್ಚು ಕಾಲೇಜು ತಂಡಗಳು ಪ್ರದರ್ಶನ ನೀಡಲು ನೋಂದಾಯಿಸಿಕೊಂಡಿವೆ. ಕಳೆದ ವರ್ಷ ಯುವ ಸಂಭ್ರಮ ಕಾರ್ಯಕ್ರಮವು ಒಟ್ಟು 8 ದಿನಗಳ ಕಾಲ ನಡೆದಿದ್ದು, ಈ ಬಾರಿ ಒಟ್ಟು 10 ದಿನಗಳ ಕಾಲ ನಡೆಯಲಿದೆ. ಪ್ರತಿ ಬಾರಿ ಯುವ ಸಂಭ್ರಮ ಕಾರ್ಯಕ್ರಮವು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತಿದ್ದು, ಈ ಬಾರಿ ಹೆಚ್ಚು ಕಾಲೇಜು ತಂಡಗಳು ಪ್ರದರ್ಶನ ನೀಡುತ್ತಿರುವುದರಿಂದ ಸಂಜೆ 5.30ಕ್ಕೆ ಆರಂಭವಾಗಲಿದೆ ಎಂದರು.

ಈ ಬಾರಿ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಪ್ರತಿ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ನಿಗದಿಪಡಿಸಿರುವ ವಾಸ್ತವಿಕ ಬಸ್ ಪ್ರಯಾನ ದರ, ತಾಲೀಮು ವೆಚ್ಚ ತಲಾ 100 ರೂ.ನಂತೆ, ವಸ್ತ್ರ ವಿನ್ಯಾಸ ವೆಚ್ಚ ತಲಾ 500 ರೂ.ನಂತೆ, ಕೊರಿಯೋಗ್ರಾಫರ್ ವೆಚ್ಚ ಕಾಲೇಜು ತಂಡವೊಂದಕ್ಕೆ 7,500 ರೂ.ನೀಡುವಂತೆ ಸಚಿವರು, ಸಂಸದರು ಸೂಚಿಸಿದ್ದಾರೆಂದು ತಿಳಿಸಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಕಾಲೇಜು ತಂಡಗಳನ್ನು ಆಯ್ಕೆ ಮಾಡಲು ನಾಲ್ವರು ತೀರ್ಪುಗಾರರಾದ ಪಿ.ಕೆ.ರಾಜಶೇಖರ್, ಹಿರಿಯ ಜಾನಪದ ಕಲಾವಿದರು, ಶೀಲ ಶ್ರೀಧರ್ ಹಿರಿಯ ಭರತನಾಟ್ಯ ಕಲಾವಿದೆ, ಪೂಜಾ ಜೋಷಿ-ಪಾಶ್ಚಾತ್ಯ ನೃತ್ಯ ಕಲಾವಿದೆ, ಸಂತೋಷ್ ಕುಮಾರ್ ಕುಸನೂರು-ರಂಗಾಯಣ ಕಲಾವಿದ ಅವರುಗಳು ಭಾಗವಹಿಸಲಿದ್ದಾರೆ.

ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ದೂರದ ಊರುಗಳಿಂದ ಬರುವ ಕಾಲೇಜು ತಂಡಗಳಿಗೆ ವಸತಿ ಮತ್ತು ಸಾರಿಗೆ ಸೌಲಭ್ಯವನ್ನು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬಯಲು ರಂಗಮಂದಿರದ ಸುತ್ತ ಮುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ, ಮೈಸೂರು ಡಿಸಿಸಿ ಬ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ.ಲಿಂಗಣ್ಣಯ್ಯ, ಕೆ.ಜಿ.ಎಸ್ ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News