ಮಳೆಹಾನಿಗೆ ಪರಿಹಾರ ಕೊಡದಿದ್ದರೆ ಬೀದಿಗಿಳಿದು ಹೋರಾಟ: ಹೆಚ್.ಡಿ.ರೇವಣ್ಣ ಎಚ್ಚರಿಕೆ

Update: 2019-09-16 17:07 GMT

ಹಾಸನ, ಸೆ.16: ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ವರ್ಗಾವಣೆ ದಂಧೆ ನಡೆಸಲಾಗುತ್ತಿದ್ದು, ಕೂಡಲೇ ಮಳೆಹಾನಿಗೆ ಪರಿಹಾರ ನೀಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಸಮಾಜವನ್ನು ಗುರಿಯಾಗಿಟ್ಟಕೊಂಡು ವರ್ಗಾವಣೆ ಮಾಡಲಾಗುತ್ತಿದೆ. ಮಹಿಳಾ ಇಂಜಿನಿಯರ್ ರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಅಧಿಕಾರಿಯಾಗಿ ಬಂದು ಆರು ತಿಂಗಳಿಗೇ ಪಿ.ಡಬ್ಲ್ಯೂ.ಡಿ. ನೀರಾವರಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 500 ಕೋಟಿಗೂ ಅಧಿಕ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಆದರೆ ಇದುವರೆಗೂ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವನೆ ಶುರುವಾಗಿದೆ. ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ದೂರಿದರು. ರೈತರಿಗೆ ಪರಿಹಾರ ಹಣವನ್ನು ನೀಡದಿದ್ದರೆ ಸುಮ್ಮನೆ ಕೂರುವುದಿಲ್ಲ. ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇನೆ. ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.

ರೈತರು ಸಂಕಷ್ಟದಲ್ಲಿದ್ದರೂ ಕೂಡ ಯಡಿಯೂರಪ್ಪ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆ ಸೇರಿದಂತೆ ಖಜಾನೆಯನ್ನು ಲೂಟಿ ಮಾಡುತ್ತಿದೆ. ಕರ್ನಾಟಕ ಸರ್ಕಾರ ಪಾಪರ್ ಚೀಟಿ ತೆಗೆದುಕೊಂಡಿದೆಯಾ ಅಥವಾ ದಿವಾಳಿಯಾಗಿದೆ ಎಂದು ಘೋಷಣೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪಗೆ ಸುಳ್ಳು ಹೇಳುವುದು ಮೊದಲಿನಿಂದಲೂ ಹವ್ಯಾಸ. ರಾಜ್ಯದಲ್ಲಿ 25 ಲೋಕ ಸಭಾ ಸ್ಥಾನಗಳನ್ನು ಗೆಲ್ಲಬೇಕಾದರೆ ಮೋದಿ ಮತ್ತು ಯಡಿಯೂರಪ್ಪ ಅವರು ಸುಳ್ಳು ಹೇಳಿದ್ದರು. ಈಗ ಮತ್ತೆ 17 ವಿಧಾನಸಭಾ ಉಪ ಚುನಾವಣೆಗೆ ಮೋದಿಯವರು ರಾಜ್ಯಕ್ಕೆ ಬಂದು ಮತ್ತಷ್ಟು ಸುಳ್ಳು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ಹಾಸನದಲ್ಲಿ ಹವಾಯ್ ಚಪ್ಪಲಿ ಹಾಕಿಕೊಂಡು ಓಡಾಡುವವರು ಬೆಂಗಳೂರಿನಲ್ಲಿ ಬೂಟು ಹಾಕಿಕೊಂಡು ತಿರುಗಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರನ್ನು ಇದೇ ಸಂದರ್ಭದಲ್ಲಿ ರೇವಣ್ಣ ಅವರು ಟೀಕಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಸೇರಿ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News